

ಕನಕಗಿರಿ: ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಗವಿಶ್ರೀ ಕ್ರೀಡಾ ಉತ್ಸವದ ಮ್ಯಾರಥಾನ್‌ನಲ್ಲಿ ತಾಲೂಕಿನ ನಾಗಲಾಪುರದ ವಿದ್ಯಾರ್ಥಿನಿ ಬಸವಲಿಂಗಮ್ಮ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಹೊಸಪೇಟೆಯ ಬೈಪಾಸ್ ರಸ್ತೆಯಿಂದ ಆರಂಭವಾದ 12 ಕಿ.ಮೀ ಮ್ಯಾರಥಾನ್, ಆರ್‌ಟಿಒ ಆಫೀಸ್ ಮೂಲಕ ಗವಿಮಠದವರೆಗೆ ಸಾಗಿತು. ಮಹಿಳೆಯರ ವಿಭಾಗದಲ್ಲಿ ಬಸವಲಿಂಗಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು, ಬೆಂಗಳೂರು ಸೌಂದರ್ಯ ಇನ್ಸಿಟ್ಯೂಟ್‌ನಲ್ಲಿ ಪತ್ರಿಕೋದ್ಯಮ ಪದವಿ ಅಧ್ಯಯನ ಮಾಡುತ್ತಿದ್ದು, ಅಲ್ಲಿಯೇ ನಿತ್ಯ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಬಸವಲಿಂಗಮ್ಮಗೆ 20 ಸಾವಿರ ರೂ. ನಗದು ಹಾಗೂ ಪಾರಿತೋಷಕವನ್ನು ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ವಿತರಿಸಿದರು.
ಹೆಣ್ಣು ಮಕ್ಕಳನ್ನು ಓದಿಸಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ನಮ್ಮ ಗ್ರಾಮದ ಯುವತಿ ಬೆಂಗಳೂರಿನಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡುತ್ತಾ ಕ್ರೀಡೆಯಲ್ಲೂ ಸಾಹಸ ಮೆರೆಯುತ್ತಿರುವುದು ಸಂತಸದ ವಿಚಾರ. ಈ ಯುವತಿ ಇತರರಿಗೆ ಮಾದರಿಯಾಗಲಿ.
ಸಂತೋಷ, ಗ್ರಾಮದ ಮುಖಂಡ