ಶಿಕ್ಷಕರು ಆತ್ಮಸಾಕ್ಷಿಯಿಂದ ಕೆಲಸ ಮಾಡಲಿ; ಕನಕಗಿರಿಯಲ್ಲಿ ಸಂಸದ ಸಂಗಣ್ಣ ಕರಡಿ ಸಲಹೆ

11092022 kanakagiri teachers day
Published on

ಕನಕಗಿರಿ: ಶಿಕ್ಷಕರು ಆತ್ಮಸಾಕ್ಷಿಯಿಂದ ಕೆಲಸ ಮಾಡಿದರೆ ದೇಶ ಪ್ರಗತಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಪಟ್ಟಣದ ಕೆಪಿಎಸ್ ಮೈದಾನದಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಂಡ ಗಂಗಾವತಿ ತಾಲೂಕು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಕಂದೀಲಾಗಿ ಕಾರ್ಯನಿರ್ವಹಿಸಿ ಇಡೀ ಸಮಾಜಕ್ಕೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಾರೆ. ಶಾಲೆಯ ಕೊಠಡಿಯೊಳಗೆ ದೇಶದ ಭವಿಷ್ಯ ರೂಪಿಸುತ್ತಾರೆ. ಇಡೀ ವಿಶ್ವವೇ ತಿರುಗಿ ನೋಡುವಂತೆ ಅಭಿವೃದ್ಧಿಯತ್ತ ದೇಶವನ್ನು ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು, ದೇಶದ 14 ಸಾವಿರ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ಪಣ ತೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣಲಿವೆ ಎಂದರು.

ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ. ಅದರಂತೆ ಶಿಕ್ಷಕರ ವರ್ಗಾವಣೆ ನಿಯಮಗಳನ್ನು ಸರಳೀಕರಣಗೊಳಿಸಿದೆ. ಶಿಕ್ಷಕರ ಇತರ ಸಮಸ್ಯೆಗಳ ಪರಿಹಾರಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದರು. ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಮಾತನಾಡಿ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಕೆಲ ತಾಲೂಕುಗಳಲ್ಲಿ ಶೇ.25ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವ ಕಾರಣ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ತಾಲೂಕಿನಿಂದ ಬೇರೆಡೆ ಹೋಗಲು ಅವಕಾಶವಿಲ್ಲ. ಈ ನಿಯಮ ಬದಲಾವಣೆ ಕಷ್ಟ ಎಂದಿದ್ದು, ವರ್ಗಾವಣೆ ಕನಸು ಕಾಣುತ್ತಿದ್ದ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಯಿತು.

ಕೊಪ್ಪಳದ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ನಡೆಯಿತು. ಡಿಡಿಪಿಐ ಎಂ.ಎ ರಡ್ಡೇರ, ತಹಸೀಲ್ದಾರ್ ಧನಂಜಯ ಮಾಲಗಿತ್ತಿ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಪಿಐ ನಾರಾಯಣ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟ ಮಧುಸೂದನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಶಂಶಾದ್ ಬೇಗಂ ಇತರರಿದ್ದರು.

ಆಹ್ವಾನ ನೀಡಿದವರೇ ಬರಲಿಲ್ಲ: ಮಾಧ್ಯಮದವರು, ಗಣ್ಯರಿಗೆ ಆಮಂತ್ರಣ ನೀಡಿದ್ದ ಕಾರ್ಯಕ್ರಮದ ಪ್ರಚಾರ ಸಮಿತಿ ಅಧ್ಯಕ್ಷ, ಕೆಪಿಎಸ್ ಉಪ ಪ್ರಾಚಾರ್ಯ ಜಗದೀಶ ಹಾದಿಮನಿ ಸಮಾರಂಭಕ್ಕೆ ಬಂದಿರಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸದ್ದರಿಂದ ಕೆಪಿಎಸ್ ಪ್ರಾಚಾರ್ಯ ಮಾರೆಪ್ಪ ಗೈರಾಗಿದ್ದರು. ಇನ್ನೂ ಅದೇ ಕಾಲೇಜಿನ ಹಾಗೂ ಉಪನ್ಯಾಸಕರ ಸಂಘದ ಅಧ್ಯಕ್ಷರಿಗೂ ಆಹ್ವಾನ ನೀಡದಿರುವುದು ಬೇಸರಕ್ಕೆ ಕಾರಣವಾಯಿತು. ಈ ನಡೆ ಖಂಡಿಸಿರುವ ದಲಿತ ಸಂಘರ್ಷ ಸಮಿತಿಯು ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಖಾನಾವಳಿಯಲ್ಲಿ ಉಂಡರು: ಕಾರ್ಯಕ್ರಮಕ್ಕೆ ಬಂದ ಹಲವು ಶಿಕ್ಷಕರು ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರ ಜತೆ ಬಂದಿದ್ದ ಹಲವರು ಊಟದಲ್ಲಾದ ಅವ್ಯವಸ್ಥೆ ಕಾರಣ ಪಟ್ಟಣದ ಖಾನಾವಳಿಗಳಿಗೆ ತಂಡ ತಂಡವಾಗಿ ತೆರಳಿ ಊಟ ಮಾಡಿದ್ದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net