

ಕನಕಗಿರಿ: ಗಂಗಾವತಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದವರ ಬಂಧನಕ್ಕೆ ಆಗ್ರಹಿಸಿ ಮಾದಿಗ ಮಾತಂಗ ಮಹರ್ಷಿ ಮಹಾಸಭಾ ತಾಲೂಕು ಘಟಕದಿಂದ ಶಿರಸ್ತೇದಾರ್ ಶರಣಪ್ಪಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಮತಿ ಸದಸ್ಯ ವೀರೇಶ ನಾಗವಂಶಿ ಮಾತನಾಡಿ, ಕೋಮು ಸೌಹಾರ್ದತೆಗೆ ಹೆಸರಾಗಿರುವ ಗಂಗಾವತಿಯಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಕಿಡಿಗೇಡಿಗಳು ಸಮಾಜ ಸುಧಾರಕರ, ಮಹನೀಯರ ವೃತ್ತ, ನಾಮಫಲಕಗಳಿಗೆ ಅವಮಾನ ಮಾಡುವ ಹುನ್ನಾರ ನಡೆಸಿರುವುದು ಖಂಡನೀಯ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಲ್ಲ ವರ್ಗದವರ ರಕ್ಷಣೆಗೆ ಸಂವಿಧಾನ ನೀಡಿದ್ದಾರೆ. ಅಂತವರ ಪ್ರತಿಮೆಗೆ ಅಪಮಾನವೆಸಗಿರುವ ಕಿಡಿಗೇಡಿಗಳನ್ನು ಬಂಧಿಸಿ, ಮುಂದೆ ಇಂತಹ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿದರು. ನಂತರ ಗೃಹ ಸಚಿವರಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ಶರಣಪ್ಪಗೆ ಸಲ್ಲಿಸಲಾಯಿತು.
ಪಪಂ ಸದಸ್ಯ ಶೇಷಪ್ಪ ಪೂಜಾರ, ಮಹಾಸಭಾದ ತಾಲೂಕು ಅಧ್ಯಕ್ಷ ನಿಂಗಪ್ಪ ಪೂಜಾರ, ಉಪಾಧ್ಯಕ್ಷರಾದ ವೆಂಕಟೇಶ ನಿರ್ಲೂಟಿ, ಹನುಮಂತ ಬಸರಿಗಿಡ, ಸದಸ್ಯರಾದ ದುರುಗಪ್ಪ ದೊಡ್ಡಮನಿ, ವೆಂಕಟೇಶ ಪೂಜಾರ, ಶಾಂತಪ್ಪ ಬಸರಿಗಿಡ, ಸಣ್ಣ ಹನುಮಂತ ಹುಲಿಹೈದರ, ಸಣ್ಣ ದುರುಗಪ್ಪ, ಮಂಜು ಮ್ಯಾಗಡೆ, ಕನಕಪ್ಪ ಮ್ಯಾಗಡೆ ಇತರರಿದ್ದರು.