

ಕನಕಗಿರಿ: ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳು ಹೆಚ್ಚಾಗಿ ನಡೆಯುವುದರಿಂದ ಬಡರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರಿಗೆ ಸಹಕಾರಿಯಾಗಲಿದೆ ಎಂದು ಪಟ್ಟಣದ ಬೆಸ್ಟ್ ಪಿಯು ಕಾಲೇಜು ಪ್ರಾಚಾರ್ಯ ರಾಮಪ್ಪ ಹೇಳಿದರು.
ಇಲ್ಲಿನ ಬೆಸ್ಟ್ ಪಿಯು ಕಾಲೇಜಿನಲ್ಲಿ ಬುಧವಾರ ಬಾಗಲಕೋಟೆಯ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕನಕಗಿರಿ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ಬಡ ಹಾಗೂ ಕೂಲಿ ಕಾರ್ಮಿಕ ವರ್ಗ ಹೆಚ್ಚಿದೆ. ಇಂತವರಿಗೆ ಆರೋಗ್ಯ ಶಿಬಿರಗಳು ಅನುಕೂಲಕರ ಎಂದರು.
ಅಸ್ಕಿ ಆಸ್ಪತ್ರೆಯ ವ್ಯವಸ್ಥಾಪಕ ವೀರೇಶ್ ಬೇವೂರು ಮಾತನಾಡಿ, ಅಸ್ಕಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಬಾಗಲಕೋಟೆ ನವನಗರದಲ್ಲಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಹಮ್ಮಿಕೊಂಡಿದ್ದ, ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವೈದ್ಯರಾದ ಸೀಮಾ, ಸಾಗರ್, ವ್ಯವಸ್ಥಾಪಕ ಭಾಗಪ್ಪ ನಾವಿ, ಪಿಆರ್‌ಒ ಬಸವರಾಜ ಇತರರಿದ್ದರು.