

ಕನಕಗಿರಿ: ಅಸಂಘಟಿತ ಕಾರ್ಮಿಕರ ನಾಲ್ಕು ಸಂಹಿತೆಗಳು ವಾಪಸ್ ಪಡೆಯಲು ಒತ್ತಾಯಿಸಿ ಸಿಐಟಿಯುನಿಂದ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದ ಕಾರ್ಮಿಕ ವರ್ಗದ ವಿರೋಧವನ್ನು ಲೆಕ್ಕಿಸದೇ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಮುಂದಾಗಿದೆ. ಇದು ದೇಶದಲ್ಲಿನ ಕಾರ್ಮಿಕರ ರಕ್ಷಣಾತ್ಮಕ ಅಂಶಗಳು, ಮೂಲಭೂತ ಹಕ್ಕುಗಳು, ವೇತನ ಕುರಿತ ವ್ಯಾಖ್ಯಾನ, ಹೋರಾಟದ ಹಕ್ಕು, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳನ್ನು ಮೊಟಕುಗೊಳಿಸಲಿವೆ. ಕಲ್ಯಾಣ ರಾಜ್ಯದ ಪರಿಕಲ್ಪನೆಗಳನ್ನು ದುರ್ಬಲಗೊಳಿಸಲಿವೆ. ಕಾರ್ಪೋರೇಟರ್‌ಗಳಿಗೆ ಕಡಿವಾಣವಿಲ್ಲದ ಲಾಭವನ್ನು ಗಳಿಸುವ ರಹದಾರಿ ಆಗಲಿದೆ. ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿರುವ ಈ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದರು.
ಕನಕಗಿರಿ ಸಿಡಿಪಿಒ ಯೋಜನೆಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಬಿ. ಅಮರಮ್ಮ ಯರಡೋಣ ಮಾತನಾಡಿ, ಕಳೆದ 50 ವರ್ಷಗಳಿಂದಿರುವ ಐಡಿಡಿಸಿ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂ ಆಗುವವರೆಗೂ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕು. ಎಫ್‌ಆರ್‌ಎಸ್‌ನಿಂದ ಅಂಗನವಾಡಿ ಸಿಬ್ಬಂದಿಗೆ ಹೊರೆಯಾಗುತ್ತಿದ್ದು, ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಐಸಿಡಿಎಸ್ ಯೋಜನೆಯ ಬಜೆಟ್ ಹೆಚ್ಚಳವಾಗಬೇಕು. ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಚುನಾವಣಾ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಳ್ಳಬಾರದು ಎಂದು ಆಗ್ರಹಿಸಿದರು.
ಸಿಡಿಪಿಒ ವಿರುಪಾಕ್ಷಿಗೆ ಅಂಗನವಾಡಿ ನೌಕರರು ಹಾಗೂ ಶಿರಸ್ತೇದಾರ ಅನಿತಾ ಇಂಡಿಗೆ ಸಿಐಟಿಯುನಿಂದ ಮನವಿ ಸಲ್ಲಿಸಲಾಯಿತು.
ಸಿಐಟಿಯು ತಾಲೂಕು ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ, ಕಾರ್ಯದರ್ಶಿ ಪರಶುರಾಮ, ಮುಖಂಡರಾದ ಹುಸೇನ್‌ಸಾಬ್ ತಾವರಗೇರಾ, ಹೊನ್ನಪ್ಪ, ಹುಸೇನಪ್ಪ, ಮುನಿಯಪ್ಪ, ವೆಂಕಟೇಶ್ ಶಿವು ಕಜ್ಜಿ, ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ರಮೇಶ್ ಬಡಿಗೇರ್, ಕೃಷಿ ಕೂಲಿಕಾರರ ಸಂಘದ ಉಪಾಧ್ಯಕ್ಷ ಬಾಳಪ್ಪ ಹುಲಿಹೈದರ, ಶಿವಕುಮಾರ್ ಸುಳೆಕಲ್, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಲಕ್ಷ್ಮೀ ಸಜ್ಜನ, ಖಜಾಂಚಿ ಸವಿತಾ, ಸದಸ್ಯರಾದ ಗಿರಿಜಾಬಾಯಿ, ಕವಿತಾ, ಅನಿತಾ, ರತ್ನಮ್ಮ, ಸುಶೀಲಾ, ಭಾಗ್ಯಲಕ್ಷ್ಮೀ ಶಶಿಕಲಾ, ನಾಗರತ್ನಾ, ಲಲಿತಾ ಅನುಸೂಯ ಇತರರಿದ್ದರು.