

ಕನಕಗಿರಿ: ಕನಕಗಿರಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೊಸದಾಗಿ ಕೆಆರ್‌ಪಿ ಪಕ್ಷ ಸ್ಥಾಪಿಸಿದ ಬಳಿಕ ಪಟ್ಟಣಕ್ಕೆ ಒಮ್ಮೆಯೂ ಭೇಟಿ ಕೊಡದೇ ಅಭ್ಯರ್ಥಿಯನ್ನು ಘೋಷಿಸಿದ್ದು, ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.
ಕನಕಗಿರಿಯು 2008ರಲ್ಲಿ ಎಸ್ಸಿ ಮೀಸಲು ಕ್ಷೇತ್ರವಾದ ಬಳಿಕ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವರಾಜ ತಂಗಡಗಿಗೆ ಅವಕಾಶ ದೊರೆಯಲಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಆಗ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದರೂ ಸ್ಪಷ್ಟ ಬಹುಮತಕ್ಕೆ ಮೂವರು ಶಾಸಕರ ಕೊರತೆ ಬಿದ್ದಾಗ ಜನಾರ್ದನರೆಡ್ಡಿ, ತಂಗಡಗಿ ಸಹಿತ ಐವರು ಪಕ್ಷೇತರರ ಮನವೊಲಿಸಿ ವಿಧಾನಸೌಧಕ್ಕೆ ಕರೆದೊಯ್ದು ಬಿಎಸ್‌ವೈ ಬಹುಮತ ಸಾಬೀತುಪಡಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸಲು ಕಾರಣರಾಗಿದ್ದರು. ಅಲ್ಲದೇ, ಪ್ರವಾಸೋದ್ಯಮ ಸಚಿವರಾಗಿದ್ದ ರೆಡ್ಡಿ ಕನಕಗಿರಿ ಉತ್ಸವಕ್ಕೆ ಅಗತ್ಯ ಸಹಕಾರ ನೀಡಿದ್ದರು. ಇದೀಗ ಹೊಸ ಪಕ್ಷದ ಮೂಲಕ ಹವಾ ಸೃಷ್ಟಿಸಿರುವ ರೆಡ್ಡಿ ಗಂಗಾವತಿ ಹತ್ತಿರ ಕನಕಗಿರಿಗೆ ಸಂಪರ್ಕಿಸುವ ರಸ್ತೆಯಲ್ಲಿಯೇ ಮನೆ ಮಾಡಿದ್ದಾರೆ. ಈಗಾಗಲೇ ಮಸೀದಿ, ದರ್ಗಾ ಸೇರಿ ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ಹಲವು ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ಆದರೆ, ಮನೆಯಿಂದ ಕೇವಲ 16 ಕಿಮೀ ದೂರದಲ್ಲಿರುವ ಕನಕಗಿರಿಗೆ ಇದುವರೆಗೆ ಭೇಟಿ ನೀಡಿಲ್ಲ. ಕೆಲ ಅಭಿಮಾನಿಗಳು ಅವರ ಮನೆಗೆ ಹೋಗಿ ಭೇಟಿಯಾಗಿದ್ದಾರೆ. ಆದರೆ, ಫೆ.16ರಂದು ಗಂಗಾವತಿಯಲ್ಲಿಯೇ ಕನಕಗಿರಿ ಕ್ಷೇತ್ರಕ್ಕೆ ಬಳ್ಳಾರಿ ಮೂಲದ ವೈದ್ಯ ಚಾರುಲ್ ವೆಂಕಟರಮಣ ದಾಸರಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಈವರೆಗೆ ಇದ್ದ ಚರ್ಚೆಗೆ ತೆರೆ ಬಿದ್ದು, ಹೊಸ ಚರ್ಚೆ ಶುರುವಾಗುವಂತೆ ಮಾಡಿದ್ದಾರೆ.
ಯಾರು ಈ ಚಾರುಲ್ ದಾಸರಿ ?
ಅಭ್ಯರ್ಥಿ ಡಾ.ಚಾರುಲ್ ದಾಸರಿ, ಬಳ್ಳಾರಿ ಮೂಲದ ವೈದ್ಯ. ಇವರ ಪತ್ನಿಯೂ ಮಕ್ಕಳ ತಜ್ಞೆಯಾಗಿದ್ದು, 50 ಬೆಡ್‌ನ ವಾಯ್ಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಡೆಸುತ್ತಿದ್ದಾರೆ. ಚಾರುಲ್‌ರ ತಂದೆ ಡಿ.ವೆಂಕಟರಮಣ ನಗರಾಭಿವೃದ್ಧಿ ಇಲಾಖೆಯಲ್ಲಿ ಎಇಇ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮಾಜ ಸೇವೆಯ ಮೂಲಕ ಹೆಸರು ಮಾಡಿದ್ದಾರೆ. ಡಿ.ವೆಂಕಟರಮಣ ಹಾಗೂ ಜನಾರ್ದನರೆಡ್ಡಿ ನಡುವೆ ಹಲವು ವರ್ಷಗಳ ಆತ್ಮೀಯ ಸಂಬಂಧವಿದೆ ಎನ್ನಲಾಗಿದೆ.