ಕನಕಾಚಲಪತಿ ಜಾತ್ರೆಯೊಂದಿಗೆ ಉತ್ಸವ ಆಚರಣೆ, ಪೂರ್ವಭಾವಿ ಸಭೆಯಲ್ಲಿ ಸಚಿವ ತಂಗಡಗಿ ಘೋಷಣೆ

Preparatory Meeting
ಕನಕಾಚಲಪತಿ ದೇವಸ್ಥಾನದಲ್ಲಿ ನಡೆದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು. ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ, ಎಡಿಸಿ ಸಿದ್ರಾಮೇಶ, ಎಸಿ ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇತರರಿದ್ದರು.
Published on

ಕನಕಗಿರಿ: ಕನಕಾಚಲಪತಿ ಜಾತ್ರೆಯೊಂದಿಗೆ ಐತಿಹಾಸಿಕ ಕನಕಗಿರಿ ಉತ್ಸವ ಆಚರಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಸ್ವಾಮಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನಕಾಚಲಪತಿ ಜಾತ್ರೆಯೊಂದಿಗೆ ಉತ್ಸವ ಆಚರಣೆಗೊಂಡರೆ ಪ್ರತಿವರ್ಷ ಕನಕಗಿರಿ ಉತ್ಸವ ಯಾವಾಗ ಎನ್ನುವ ಪ್ರಶ್ನೆ ತಪ್ಪಿ, ಪ್ರತಿ ವರ್ಷವೂ ಜಾತ್ರೆಯೊಂದಿಗೆ ಉತ್ಸವ ಎನ್ನುವ ಪರಿಪಾಠ ಬೀಳುತ್ತದೆ. ಅದಕ್ಕಾಗಿ ಪ್ರಸಕ್ತ ವರ್ಷದ ಜಾತ್ರೆಯಿಂದ ಕನಕಗಿರಿ ಉತ್ಸವಕ್ಕೆ ಪೀಠಿಕೆ ಹಾಕಲಾಗಿದ್ದು, ಇದೊಂದು ದೂರದೃಷ್ಠಿ ಯೋಚನೆ ಎಂದರು.

ಜಾತ್ರೆ ಮತ್ತು ಉತ್ಸವ ಒಂದೇ ಸಮಯದಲ್ಲಿ ಆಚರಿಸುವುದರಿಂದ ಕನಕಗಿರಿ ಇತಿಹಾಸಕ್ಕೆ ಹೊಸ ಮೆರುಗು ಸಿಗಲಿದೆ. ಇಲ್ಲಿನ ಶಿಲ್ಪಕಲೆ, ವಾಸ್ತುಶಿಲ್ಪ, ಮಠ, ಮಂದಿರಗಳು, ಸಂಗೀತ, ಸಾಹಿತ್ಯ ರಾಜ್ಯವ್ಯಾಪಿ ತಿಳಿಯಲಿದೆ. ಜಾತ್ರೆಯಲ್ಲಿ ಧಾರ್ಮಿಕ ಸಂಪ್ರದಾಯಗಳ ಜತೆಗೆ ಉತ್ಸವದ ಮೂಲಕ ಇಲ್ಲಿನ ಇತಿಹಾಸ ಹೆಚ್ಚು ಪ್ರಚಲಿತವಾಗಲಿದೆ. ಪರಿಷೆಗೆ ಬಂದವರಿಗೆ ಮನರಂಜನೆಯೂ ದೊರೆಯಲಿದೆ ಎಂದರು.

ಇದೊಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ನೋಡದೆ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನಕಾಚಲ ಜಾತ್ರೆ ಕನಕಗಿರಿ ಉತ್ಸವ ಆಚರಿಸುವುದು ಸೂಕ್ತ. ಇದರ ಸಾಧಕ-ಬಾಧಕಗಳನ್ನು ಚರ್ಚಿಸಿ ಆಚರಣೆಗೆ ಮುಂದಾಗಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊನೆಗೆ ಸಭಿಕರು ಉತ್ಸವ ಆಚರಣೆಗೆ ಒಮ್ಮತ ಸೂಚಿಸಿದ ಹಿನ್ನೆಲೆಯಲ್ಲಿ ಸಚಿವ ಶಿವರಾಜ ತಂಗಡಗಿ ಗರುಡೋತ್ಸವ ದಿನವಾದ ಮಾ.20 ಹಾಗೂ ರಥೋತ್ಸವ ದಿನವಾದ 21ರಂದು ಉತ್ಸವ ಆಚರಣೆಗೆ ನಿರ್ಧರಿಸಿ ದಿನಾಂಕ ಘೋಷಣೆ ಮಾಡಿದರು.

ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಎಡಿಸಿ ಸಿದ್ರಾಮೇಶ, ಎಸಿ ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಕನಕಪ್ಪ ಬಿ, ವೀರೇಶ ಸಮಗಂಡಿ, ಮಹಾಂತೇಶ ಸಜ್ಜನ, ಸಣ್ಣ ಕನಕಪ್ಪ, ವಾಗೀಶ ಹಿರೇಮಠ ಇತರರಿದ್ದರು.

ಮೂಲ ಸೌಲಭ್ಯ ಕಲ್ಪಿಸಿ: ಕನಕಾಚಲಪತಿ ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಮೂಲ ಸೌಲಭ್ಯ ಒದಗಿಸಲು ಅಧಿಕಾರಿಗಳು ಮುಂದಾಗಬೇಕು. ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ, ಸುಣ್ಣ-ಬಣ್ಣ, ಪುಷ್ಕರಣಿ, ವೆಂಕಟಾಪತಿ ಬಾವಿ ಸ್ವಚ್ಛತೆ, ಪೊಲೀಸ್ ಬಂದೋಬಸ್ತ್, ವಾಹನ ನಿಲುಗಡೆ, ತಾತ್ಕಾಲಿಕ ಆರೋಗ್ಯ ಕೇಂದ್ರ, ರಥೋತ್ಸವ ಅರ್ಹತಾ ಪ್ರಮಾಣಪತ್ರ ನೀಡುವುದು, ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನ ತರಿಸುವುದು, ಬಂದ ಭಕ್ತರಿಗೆ ಅನ್ನ ದಾಸೋಹ ನಡೆಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net