

ಕನಕಗಿರಿ: ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳು ಈಗಿನಿಂದಲೇ ಶ್ರಮವಹಿಸಿ ವೈಕ್ತಿಕವಾಗಿ ಉತ್ತಮ ಅಂಕ ಪಡೆಯುವ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಕೊಡುಗೆ ನೀಡಬೇಕು ಎಂದು ತಾಪಂ ಇಒ ಕೆ. ರಾಜಶೇಖರ ಹೇಳಿದರು.
ತಾಲೂಕಿನ ಸುಳೇಕಲ್ ಗ್ರಾಪಂ ವ್ಯಾಪ್ತಿಯ ನಾನಾ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಸೋಮವಾರ ಭೇಟಿ ನೀಡಿದ ವೇಳೆಯಲ್ಲಿ ಕಲಕೇರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಕಳೆದ ಸಾಲಿನ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ತುಂಬಾ ಕಳಪೆಯಾಗಿದೆ. ಉತ್ತಮ ಪ್ರಗತಿ ಸಾಧಿಸಲು ವಿದ್ಯಾರ್ಥಿಗಳು ಯಾವ ರೀತಿ ಅಧ್ಯಯನ ಮಾಡಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಿದರು. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದು ಶಾಲೆ, ಗ್ರಾಮ, ಪಾಲಕರಿಗೆ ಕೀರ್ತಿ ತರಬೇಕೆಂದರು.
ಶಿಕ್ಷಕರಾದ ಮಹದೇವ ಸ್ವಾಮಿ, ತಾಂತ್ರಿಕ ಸಂಯೋಜಕ ಸೈಯದ್ ತನ್ವೀರ್, ಗ್ರಾಪಂ ಕಾರ್ಯದರ್ಶಿ ನಾಗಪ್ಪ, ಸದಸ್ಯ ಬೆಟ್ಟಪ್ಪ, ಗ್ರಾಪಂ ಕಂಪ್ಯೂಟರ್ ಆಪರೇಟರ್ ದುರುಗೇಶ್ ಇತರರಿದ್ದರು.