

ಕನಕಗಿರಿ: ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಗಾಗಿ ನವಲಿ ಗ್ರಾಮದಲ್ಲಿ ಕಟ್ಟಡ ನಿರ್ಮಾಣಕ್ಕೆ 20 ರೂ. ಕೋಟಿ ಮೀಸಲಿರಿಸಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕು ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಸೋಮವಾರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 2014ರಲ್ಲಿ ಮಂಜೂರಾಗಿದ್ದ ಶಾಲೆಯನ್ನು ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗಿತ್ತು. ಸದರಿ ಶಾಲೆಗೆ ಶಾಶ್ವತ ಕಟ್ಟಡಕ್ಕಾಗಿ ಇಲಾಖೆಯಿಂದ ಅನುದಾನ ಮಂಜೂರು ಮಾಡಿ ಟೆಂಡರ್ ಕರೆಯಲಾಗಿದೆ. 13.67 ಲಕ್ಷ ರೂ, ವೆಚ್ಚದಲ್ಲಿ ಇಂಗಳದಾಳದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, 21.07 ಲಕ್ಷ ರೂ. ವೆಚ್ಚದಲ್ಲಿ ಮುಸಲಾಪೂರ ಗ್ರಾಮದ ಭೋವಿ ಕಾಲನಿಯಲ್ಲಿ ಸಿ.ಸಿ. ರಸ್ತೆ, ಬೊಮ್ಮಸಾಗರ ತಾಂಡಾದ ಸಿಸಿ ರಸ್ತೆ ನಿರ್ಮಾಣಕ್ಕೆ 21.07 ಕೋಟಿ ರೂ. ಬಿಡುಗಡೆಯಾಗಿದ್ದು, ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಹಾಗೂ ಸುಧಾರಣೆಗೆ 210 ಕೋಟಿ ರೂ. ಬಿಡುಗಡೆಯಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕ್ಷೇತ್ರಕ್ಕೆ 34 ಕೋಟಿ ರೂ., ಪಂಚಾಯತ್ ರಾಜ್ ಇಲಾಖೆಯಡಿ 20 ಕೋಟಿ ರೂ., ಕೆಕೆಆರ್‌ಡಿಬಿ ಯೋಜನೆಯಡಿ 35 ಕೋಟಿ ರೂ., ಚಿರ್ಚನಗುಡ್ಡ ಕ್ರಾಸ್‌ನಿಂದ ವಡಕಿ ಕ್ರಾಸ್‌ವರೆಗಿನ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ., ಲೋಕೋಪಯೋಗಿ ಇಲಾಖೆಯಿಂದ 15 ಕೋಟಿ ರೂ., ರಸ್ತೆ ಅಭಿವೃದ್ಧಿ ಹಾಗೂ ಸುಧಾರಣೆಗಾಗಿ ಮಂಜೂರಾಗಿದ್ದು, ಟೆಂಡರ್ ಮುಗಿದ ಬಳಿಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕನಕಗಿರಿಗೆ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದ್ದು, ಶೀಘ್ರವೇ ಕಾರ್ಯಾರಂಭವಾಗಲಿದೆ ಎಂದರು.
ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ಸಾವಿಗಿಡಾದ ಗೌರಿಪುರ ಗ್ರಾಪಂ ನೌಕರ ವಿಜಯಕುಮಾರ ನಿವಾಸಕ್ಕೆ ಸಚಿವ ತಂಗಡಗಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವಿಜಯಕುಮಾರ ಪತ್ನಿಗೆ ಗ್ರಾಪಂನಲ್ಲಿ ಕೆಲಸ ನೀಡುವಂತೆ ತಾಪಂ ಇಒ ರಾಜಶೇಖರಗೆ ಸೂಚಿಸಿದರು. ಮೃತ ನೌಕರನ ಸಹೋದರಿಗೂ ಅಂಗನವಾಡಿ ಅಥವಾ ಗಣಕಯಂತ್ರ ಹುದ್ದೆ ನೀಡುವಂತೆ ತಹಸೀಲ್ದಾರ್‌ಗೆ ಆದೇಶಿಸಿದರು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಿಡಿಒ ನಾಗೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ಶಾಂತಪ್ಪ ಬಸರಿಗಿಡ, ಸತ್ಯಪ್ಪ ಭೋವಿ, ವಿರೂಪಾಕ್ಷ್ಮಿ ಆಂಧ್ರ, ಪಂಪಾಪತಿ ತರ್ಲಕಟ್ಟಿ, ಶರಣಪ್ಪ ಸೋಮಸಾಗರ ಇತರರಿದ್ದರು.