ಪರಿಸರ ಸಂರಕ್ಷಣೆಗೆ ಸಹಕರಿಸಿ

PARISARA
ಕನಕಗಿರಿ ತಾಲೂಕಿನ ಬಂಕಾಪುರ ಸಹಿಪ್ರಾ ಶಾಲೆಯಲ್ಲಿ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ ಉದ್ಘಾಟಿಸಿದರು. ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಚ್.ಮುಲ್ಲಾ, ವಲಯ ಅರಣ್ಯಾಧಿಕಾರಿ ಸುಭಾಷ್‌ಚಂದ್ರ ನಾಯಕ ಇತರರಿದ್ದರು.
Published on

ಕನಕಗಿರಿ: ಜಾಗತೀಕರಣ ನೆಪದಲ್ಲಿ ನಡೆಯುತ್ತಿರುವ ಅರಣ್ಯನಾಶ, ವನ್ಯಜೀವಿಗಳ ಸಂಘರ್ಷ, ಅರಣ್ಯ ಒತ್ತುವರಿ ಹೀಗೆ ನಾನಾ ಒತ್ತಡದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವನ್ಯಜೀವಿಗಳು, ಅರಣ್ಯ ಸಂಪತ್ತಿನ ಉಳಿವಿಗೆ ಅವಿರತ ಶ್ರಮಿಸುತ್ತಿದ್ದಾರೆ ಎಂದು ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ ಹೇಳಿದರು.

ತಾಲೂಕಿನ ಬಂಕಾಪುರ ಸ.ಹಿ.ಪ್ರಾ.ಶಾಲೆಯಲ್ಲಿ ಅರಣ್ಯ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ವನ್ಯಜೀವಿ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ವನ್ಯ ಪ್ರಾಣಿಗಳಾದ ಕರಡಿ, ಚಿರತೆ, ಹೈನಾ, ತೋಳ, ನರಿ, ನೀರು ನಾಯಿಗಳ ಸಂತತಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕಾಗಿದೆ. ವನ್ಯಜೀವಿಗಳಿಂದಲೂ ಅರಣ್ಯ ಸಂಪತ್ತು ವೃದ್ಧಿಯಾಗುವ ಸಾಧ್ಯತೆಗಳಿವೆ. ಇವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ. ಪರಿಸರ ಹಾಗೂ ವನ್ಯಪ್ರಾಣಿಗಳ ಉಳವಿಗೆ ಸಮುದಾಯ ಸಹಕರಿಸಬೇಕು ಎಂದರು.

ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಚ್.ಮುಲ್ಲಾ ಮಾತನಾಡಿ, ಪ್ರತಿಯೊಂದು ಪ್ರದೇಶ ವಿಭಿನ್ನವಾಗಿರುತ್ತದೆ. ಅದರಂತೆ ಕುರುಚಲು ಗುಡ್ಡಗಾಡು ಹೆಚ್ಚಿನ ಪ್ರಮಾಣದಲ್ಲಿರುವ ಕನಕಗಿರಿ ಸುತ್ತಮುತ್ತಲಿನ ಪ್ರದೇಶದಲ್ಲಿ ವನ್ಯಜೀವಿಗಳ ಆವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ರಾಜ್ಯದ ಮೊದಲ ತೋಳಧಾಮ ಬಂಕಾಪುರದಲ್ಲಿದೆ. ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೋಳಧಾಮದ ಬಗ್ಗೆ ಪ್ರಶ್ನೆ ಸಹ ಕೇಳಲಾಗಿದೆ ಎಂದರು.

ವಲಯ ಅರಣ್ಯಾಧಿಕಾರಿ ಸುಭಾಷ್‌ಚಂದ್ರ ನಾಯಕ, ವಲಯ ಅರಣ್ಯಾಧಿಕಾರಿಗಳಾದ ಶಿವರಾಜ ಮೇಟಿ, ಎಲ್. ಸ್ವಾತಿ, ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸ, ಹನುಮಂತಪ್ಪ, ಗಸ್ತು ಪಾಲಕರಾದ ಶಿವಕುಮಾರ ವಾಲಿ, ದಾವಲಸಾಬ, ಚಂದ್ರಶೇಖರ ಭಾಗವತ್, ಅರಣ್ಯ ವೀಕ್ಷಕ ಈರಪ್ಪ ಹಾದಿಮನಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net