

ಕನಕಗಿರಿ: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 16 ಕುರಿ, 2 ಎತ್ತು ಸಾವನ್ನಪ್ಪಿದ್ದ ತಾಲೂಕಿನ ಕರಡಿಗುಡ್ಡ ಗ್ರಾಮಕ್ಕೆ ತಹಸೀಲ್ದಾರ್ ಸಂಜಯ್ ಕಾಂಬ್ಳೆ ಹಾಗೂ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬುಧವಾರ ತಡರಾತ್ರಿ ಘಟನೆ ನಡೆದಿದ್ದು, ವಿಷಯ ಅರಿತ ಜೆಸ್ಕಾಂ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ್ದರು.
ಗುರುವಾರ ಬೆಳಗ್ಗೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳೊಂದಿಗೆ ತಹಸೀಲ್ದಾರ್ ಸಂಜಯ ಕಾಂಬ್ಳೆ ಕರಡಿಗುಡ್ಡಕ್ಕೆ ತೆರಳಿ ಸತ್ತ ಕುರಿ ಹಾಗೂ ಎತ್ತುಗಳನ್ನು ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಮಳೆ ಹಾನಿ ನಿಯಂತ್ರಣ, ಪರಿಹಾರ ಕ್ರಮಗಳಿಗೆ ಡಿಸಿ ಸೂಚನೆ
ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿ ನಷ್ಟದ ಮೌಲ್ಯದ ವರದಿ ನೀಡುವಂತೆ ಸೂಚಿಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ತಿಳಿಸಿದರು. ಜೆಸ್ಕಾಂ ಇಲಾಖೆಯಿಂದ ರೈತನಿಗೆ ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿದರು.
ಕಂದಾಯ ನಿರೀಕ್ಷಕ ಬಸ್ರುದ್ದೀನ್, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ, ರೈತರಾದ ಕನಕಪ್ಪ, ಯಂಕಪ್ಪ ದಾಸರ, ಪ್ರಮುಖರಾದ ಕೆ. ಗಂಗಾಧರಸ್ವಾಮಿ, ರಾಕೇಶ ಇತರರಿದ್ದರು.