

ಕನಕಗಿರಿ: ದಸರಾ ರಜೆಯ ಬಳಿಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮಂಗಳವಾರ ಪುನರಾರಂಭವಾಗಿದ್ದು, ಕೆ. ಕಾಟಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪಾವಳಿ ಆಚರಣೆ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದ ಎರಡನೇ ಸೆಮಿಸ್ಟರ್‌ನ ಪಾಠಗಳನ್ನು ಆರಂಭಿಸಲಾಯಿತು.
ವಾಡಿಕೆಯಂತೆ ನಾಡಹಬ್ಬ ದಸರಾದಲ್ಲಿ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಅದರಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಸರಾ ರಜೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಶಿಕ್ಷಕರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿಗೆ ಬಳಸಿಕೊಂಡಿತ್ತು. ಆದರೆ, ನಿಗದಿಯಂತೆ ರಜೆ ಮುಗಿದ ಬಳಿಕ ಶಾಲೆಗಳು ಆರಂಭವಾಗಬೇಕಿದ್ದರೂ ಸಮೀಕ್ಷಾ ಕಾರ್ಯದ ದಿನಗಳನ್ನು ಮುಂದೂಡಿದ್ದರಿಂದ ಶಾಲೆಗಳ ಆರಂಭವೂ ತಡವಾಗಿತ್ತು.
ಈ ಹಿನ್ನೆಲೆಯಲ್ಲಿ ದೀಪಾವಳಿ ಅಮಾವಾಸ್ಯೆ ಮರುದಿನವಾದ ಮಂಗಳವಾರ ಶಾಲೆಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಬಂದ ಮಕ್ಕಳು ಶಾಲೆಯಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಿ, ಬೆಳಕಿನ ದ್ಯೋತಕವಾಗಿ ದೀಪಗಳನ್ನು ಬೆಳಗಿಸಿ, ಪಟಾಕಿ ಹಚ್ಚಿ ದೀಪಾವಳಿ ಸಂಭ್ರಮಪಟ್ಟರು. ಶಿಕ್ಷಕರಿಗೆ ಹಬ್ಬದ ಶುಭಾಷಯ ತಿಳಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು.
ಶಾಲೆಯ ಮುಖ್ಯ ಶಿಕ್ಷಕ ವೆಂಕೋಬ ಪೂಜಾರ್, ಅತಿಥಿ ಶಿಕ್ಷಕರಾದ ವೀರನಗೌಡ, ಈರಮ್ಮ, ಅಡುಗೆ ಸಿಬ್ಬಂದಿ ಲಕ್ಷ್ಮೀ, ಶಾಂತಮ್ಮ, ಗಂಗಮ್ಮ ಮಕ್ಕಳೊಂದಿಗೆ ಹಬ್ಬ ಆಚರಿಸಿದರು.