

ಕನಕಗಿರಿ: ಪಟ್ಟಣದ ಸರ್ವೆ ನಂ.156ರ ಭೂಮಿ ಹಾಗೂ 370ರ ವೆಂಕಟರಮಣ ದೇವಸ್ಥಾನ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡದಂತೆ ಆಗ್ರಹಿಸಿ ಶುಕ್ರವಾರ ಹಿಂದು ಜಾಗರಣ ವೇದಿಕೆಯಿಂದ ಶಿರಸ್ತೇದಾರ್ ಶರಣಪ್ಪಗೆ ಮನವಿ ಸಲಿಸಲಾಯಿತು.
ವೇದಿಕೆ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಮಾತನಾಡಿ, ಪಟ್ಟಣದ ಗಂಗಾವತಿ ರಸ್ತೆಗೆ ಹೊಂದಿಕೊಂಡಿರುವ ಸರ್ವೇ ನಂ. 156ರ ಭೂಮಿಯು ಜಾನುವಾರು ಮೇಯಿಸಲು ಮೀಸಲಿಟ್ಟ ಗೋಮಾಳ ಜಾಗವಾಗಿತ್ತು. ಆದರೆ, 1998ರಲ್ಲಿ ಕೆಲವರು ಸುಳ್ಳು ಮಾಹಿತಿ ನೀಡಿ ಸ್ಮಶಾನಕ್ಕಾಗಿ 10 ಎಕರೆ ಭೂಮಿ ಪಡೆದುಕೊಂಡಿದ್ದಾರೆ. ಹಿರೇಹಳ್ಳದ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿನ ವೆಂಕಟರಮಣ ದೇವಸ್ಥಾನವಿರುವ ಸರ್ವೇ ನಂ.370ರಲ್ಲಿ ಯಲ್ಲಮ್ಮ, ಗೋಲಗೇರಪ್ಪ ದೇವಸ್ಥಾನ, ಸುವರ್ಣಗಿರಿ ಮೂಲ ಮಠ ಇತರ ಪುರಾತನ ದೇಗುಲಗಳಿದ್ದವು. ಇದನ್ನು ವಕ್ಫ್ ಆಸ್ತಿಯೆಂದು ಹಿಂದುಗಳಿಗೆ ನೊಟೀಸ್ ನೀಡುತ್ತಾ ಬರಲಾಗುತ್ತಿದೆ.
ಪ್ರಸಕ್ತ ವರ್ಷದ ಜನವರಿ ತಿಂಗಳಲ್ಲಿ ಸರ್ವೇ ನಂ.370ರ ವೆಂಕಟರಮಣ ದೇವಸ್ಥಾನವಿರುವ ಭೂಮಿಯಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತ ಮುಖ್ಯಾಧಿಕಾರಿಗಳು, ಪೊಲೀಸ್ ಇಲಾಖೆಯಿಂದ ಹಿಂದು-ಮುಸ್ಲಿಂ ಹಿರಿಯರ ಸಭೆ ನಡೆಸಿ ಒಮ್ಮತದಿಂದ ಭೂಮಿ ಹಂಚಿಕೆ ಮಾಡಿಕೊಳ್ಳಲಾಗಿರುತ್ತದೆ. ಆದರೆ, ಈ ಭೂಮಿಯ ಕುರಿತು ಪುನಃ ವಕ್ಫ್ ಬೋರ್ಡ್‌ನಿಂದ ನೋಟಿಸ್ ನೀಡುತ್ತಿರುವುದು ಖಂಡಿನೀಯ. ಇದರಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.
ಸರ್ವೇ ನಂ.370 ಹಾಗೂ 156ರಲ್ಲಿ ಅನ್ಯ ಕೋಮಿನವರು ಶವ ಸಂಸ್ಕಾರ ಮಾಡದಂತೆ ಕ್ರಮ ವಹಿಸಬೇಕು ಎಂದು ಹನುಮಂತರೆಡ್ಡಿ, ಅಯ್ಯನಗೌಡ ಅಳ್ಳಳ್ಳಿ ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಪಪಂ ಸದಸ್ಯ ಅನಿಲ ಬಿಜ್ಜಳ, ಪ್ರಮುಖರಾದ ದೊಡ್ಡ ಮಹಾಂತೇಶ ಸಜ್ಜನ, ಬಸವರೆಡ್ಡಿ ಸಾನಬಾಳ, ಪೃಥ್ವಿ ಮ್ಯಾಗೇರಿ, ಹನುಮೇಶ, ಅಂಬಣ್ಣ ಹೂಗಾರ, ವಿನೋದ ಮರಾಠಿ, ಜೀವಣ್ಣ ದುಮ್ಮಾಳ್, ಸಂಪತ್, ಶಿವಕುಮಾರ, ಗಂಗಾಮತ, ನಾಗರಾಜ ಇತರರಿದ್ದರು.