ಬಿಸಿಯೂಟ ಹಣ ದುರ್ಬಳಕೆ ಮಾಡಿಕೊಂಡ ಶಿಕ್ಷಕ ಅಮಾನತು

TEACHER
ಜ.26ರಂದು ವಿಜಯವಾಣಿ ಪ್ರಕಟಿಸಿದ ವರದಿ.
Published on

ಕನಕಗಿರಿ: ಕರೊನಾ ಸಂದರ್ಭದಲ್ಲಿ ಬಿಸಿಯೂಟ ತಯಾರಿಕೆ ಮಾಡಲು ಅವಕಾಶವಿಲ್ಲದಿದ್ದರಿಂದ ಅದರ ವೆಚ್ಚವನ್ನು (ಪರಿವರ್ತನಾ ವೆಚ್ಚ) ಅಕೌಂಟ್ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬೇಕಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಶಿಕ್ಷಕನನ್ನು ಬಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?: ಈ ಹಿಂದೆ ಬೈಲಕ್ಕುಂಪುರ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಉಮೇಶ ಲಮಾಣಿ ನಂತರ ವರ್ಗಾವಣೆಗೊಂಡು ಇಲ್ಲಿನ ಇಂದಿರಾನಗರ ಶಾಲೆಗೆ ಬಂದಿದ್ದರು. ಬರುವಾಗ ಮಕ್ಕಳಿಗೆ ವರ್ಗಾವಣೆಗೊಳಿಸಬೇಕಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ಜ.9ರಂದು ಎಸ್‌ಡಿಎಂಸಿಯವರು ಬಿಇಒಗೆ ದೂರು ಸಲ್ಲಿಸಿದ್ದರು.

ಅಲ್ಲದೇ, ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಇದನ್ನು ಮುಚ್ಚಿ ಹಾಕಲು ರಾತ್ರೋರಾತ್ರಿ ಹಣ ಹಂಚಿಕೆಗೆ ಮುಂದಾಗಿದ್ದು, ಜ.19ರಂದು ಮತ್ತೋರ್ವ ಶಾಲೆಯ ಶಿಕ್ಷಕನೊಂದಿಗೆ ಶಾಲೆಗೆ ತೆರಳಿ ಹಣ ಹಂಚಿಕೆ ಮಾಡಿ ವಿದ್ಯಾರ್ಥಿಗಳಿಂದ ಸಹಿ ಮಾಡಿಸಿಕೊಳ್ಳಲು ಮುಂದಾಗಿದ್ದರು.

ಈ ಕುರಿತು ಜ.26ರಂದು ವಿಜಯವಾಣಿಯಲ್ಲಿ ‘ಶಿಕ್ಷಕನಿಂದ ಬಿಸಿಯೂಟದ ಹಣ ದುರ್ಬಳಕೆ’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಆದರೆ, ಒಂದೂವರೆ ತಿಂಗಳಾದರೂ ಕ್ರಮವಾಗಿರಲಿಲ್ಲ. ಮಾ.11ರಂದು ಅನುಮಾನ ಹುಟ್ಟಿಸಿದ ಇಲಾಖೆ ಅಧಿಕಾರಿಗಳ ನಡೆ ಎನ್ನುವ ಸುದ್ದಿ ಪ್ರಕಟಗೊಂಡಿದ್ದು, ಮಾ.14ರಂದು ಬಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪತ್ನಿ ಹೆಸರಿಗೆ ಹಣ ವರ್ಗಾವಣೆ?

ಪತ್ರಿಕೆಯಲ್ಲಿ ವರದಿಯಾದ ಬಳಿಕ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಒಟ್ಟು ದುರ್ಬಳಕೆ ಮಾಡಿಕೊಂಡ ಹಣದ ಪೈಕಿ 12,152 ರೂ.ಹಣ ಶಿಕ್ಷಕರ ಪತ್ನಿ ಖಾತೆಗೆ ಜಮಾ ಆಗಿರುವುದು ಹಾಗೂ ಪರಿಕರದ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಅಮಾನತು ಆದೇಶದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net