ಯಾರಿಂದಲೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ - ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಹೇಳಿಕೆ

Kanakachalapati Temple Visit A NarayanaSwamy
ಕನಕಗಿರಿಯ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಸಂಸದ ಎ.ನಾರಾಯಣಸ್ವಾಮಿ ಶುಕ್ರವಾರ ಭೇಟಿ ನೀಡಿದರು.
Published on

ಕನಕಗಿರಿ: ದೇಶದಲ್ಲಿ ಆಡಳಿತಕ್ಕೆ ಬರುವ ಯಾವುದೇ ಪ್ರಧಾನಿಯಿಂದಲೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿದ್ದ ದಲಿತರು 2018ರಿಂದ ಬಿಜೆಪಿ ಪರವಾಗಿರುವುದರಿಂದ ಕಾಂಗ್ರೆಸ್ ಆತಂಕಕ್ಕೊಳಗಿದೆ. ಅದಕ್ಕಾಗಿ ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಸಹ ಪ್ರಧಾನಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀರಾಮುಲುಗೆ ದೊಡ್ಡ ಜವಾಬ್ದಾರಿ ಸಿಗಬಹುದು. ಸದಾಶಿವ ಆಯೋಗದ ಜಾರಿ ಬಗ್ಗೆ ಚರ್ಚೆಯಾಗುತ್ತಿದ್ದು, ಲಮಾಣಿ, ಭೋವಿ ಸಮುದಾಯವನ್ನು ಮೀಸಲಾತಿಯಿಂದ ಕೈಬಿಡುವುದಿಲ್ಲ. ಬಿಜೆಪಿ ಸರ್ಕಾರವಿರುವಾಗಲೇ ವರದಿ ಜಾರಿಯಾಗಲಿದೆ ಎಂದು ತಿಳಿಸಿದರು.

ಕನಕಗಿರಿ, ಗಂಗಾವತಿ ಕ್ಷೇತ್ರದಂತೆ ಮಸ್ಕಿಯಲ್ಲಿಯೂ ಎಡ ಬಲ ಎನ್ನದೆ ಎಲ್ಲ ದಲಿತ ಸಮುದಾಯಗಳು ಬಿಜೆಪಿ ಪರವಾಗಿವೆ. ಸದಾಶಿವ ಆಯೋಗಕ್ಕೆ ಯಡಿಯೂರಪ್ಪನವರು ಅನುದಾನ ನೀಡಿದ್ದಲ್ಲದೆ, ದಲಿತರಿಗೆ ವಿವಿಧ ಯೋಜನೆ ಜಾರಿಗೆ ತಂದಿರುವುದು ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಪಪಂ ಸದಸ್ಯರಾದ ಸುಭಾಷ ಕಂದಕೂರು, ರವಿ ಭಜಂತ್ರಿ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ಕಾರ್ಯದರ್ಶಿ ವಾಗೇಶ ಹಿರೇಮಠ, ಮಹಿಳಾ ಮೋರ್ಚಾ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ಎಸ್‌ಸಿ ಮೋರ್ಚಾ ಅಧ್ಯಕ್ಷ ಹನುಮಂತ ಬಸರಿಗಿಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net