

ಕನಕಗಿರಿ: ಹಲವು ಗೊಂದಲಗಳ ನಡುವೆ ಜೂ.14ರಂದು ಲೋಕಾರ್ಪಣೆಗೊಂಡಿದ್ದ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಸಚಿವರ ಕೆಂಗಣ್ಣಿಗೆ ಗುರಿಯಾಗಿದ್ದು, ಶಿಷ್ಟಾಚಾರ ಉಲ್ಲಂಘನೆ ನೆಪದಲ್ಲಿ ಕೊನೆಗೂ ಪಿಡಿಒ ಅಮಾನತಾಗಿದ್ದಾರೆ. ಉದ್ಘಾಟನೆಗೆ ಗೈರಾಗಿದ್ದ ನೀಲಾ ಸೂರ್ಯಕುಮಾರಿಯನ್ನು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜೂ.14ರಂದು ಆಗಿನ ಗ್ರಾಪಂ ಆಡಳಿತ ಮಂಡಳಿಯು ತಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ಕಟ್ಟಡ ಉದ್ಘಾಟಿಸಬೇಕೆಂದು ಆಗ ತಾನೇ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದ ಶಿವರಾಜ ತಂಗಡಗಿಯನ್ನು ಆಹ್ವಾನಿಸಿತ್ತು ಎನ್ನಲಾಗಿದೆ. ಆದರೆ, ಸಚಿವ ತಂಗಡಗಿ ದಿನಾಂಕ ನಿಗದಿಪಡಿಸಿರಲಿಲ್ಲ. ಇದರಿಂದ ಆಗಿನ ಅಧ್ಯಕ್ಷ ಹಾಗೂ ಸದಸ್ಯರು ಕಟ್ಟಡವನ್ನು ಉದ್ಘಾಟಿಸಿದ್ದರು. ಪಿಡಿಒ ಅನಾರೋಗ್ಯದ ನೆಪದಲ್ಲಿ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಇದು ಸಚಿವರ ಬೇಸರಕ್ಕೆ ಕಾರಣವಾಗಿತ್ತು. ಆಗಸ್ಟ್ ತಿಂಗಳಲ್ಲಿ ಚಿಕ್ಕ ಮಾದಿನಾಳಕ್ಕೆ ಭೇಟಿ ನೀಡಿದ್ದ ತಂಗಡಗಿ, ಶಿಷ್ಟಾಚಾರ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚಿಸಿದ್ದರು. ಆದರೆ, ಪಿಡಿಒ ಮಾತ್ರ ಕ್ರಮ ವಹಿಸಿರಲಿಲ್ಲ. ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿತ್ತು. ಇಲಾಖೆಯಿಂದ ಕೇಳಿದ ನೋಟಿಸ್‌ಗೂ ಪಿಡಿಒ ಸಮರ್ಪಕ ಉತ್ತರ ನೀಡದಿದ್ದರಿಂದ ಸಿಇಒ ಅಮಾನತು ಮಾಡಿ ಆದೇಶಿಸಿದ್ದಾರೆ.
ಈ ಕುರಿತು ವಿಜಯವಾಣಿ ಜೂ.15ರಂದು ‘ಗೊಂದಲಗಳ ನಡುವೆ ಗ್ರಾಪಂ ಕಚೇರಿ ಉದ್ಘಾಟನೆ’ ಹಾಗೂ ಆ.17ರಂದು ‘ಚಿಕ್ಕ ಮಾದಿನಾಳ ಗ್ರಾಪಂ ಕಚೇರಿ ಉದ್ಘಾಟನೆ ಗೊಂದಲ’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.