ಕನಕಗಿರಿಯಲ್ಲಿಲ್ಲ ಕಾಯಂ ವೈದ್ಯರು

Kanakagiri Government hospital
ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದ ಹೊರನೋಟ.
Published on

ಮಧುಸೂದನ ಎಚ್.ಮಾದಿನಾಳ

ಕನಕಗಿರಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮೇಲೆ ಬಂದು ವೈದ್ಯರ ಕೊರತೆ ನೀಗಿಸಿದ್ದ ಡಾಕ್ಟರ್‌ಗಳಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಸೂಚನೆಯಿಂದ ಇಲ್ಲಿನ ಆಸ್ಪತ್ರೆಗೆ ವೈದ್ಯರ ಕೊರತೆ ಎದುರಾಗುವ ಆತಂಕ ಶುರುವಾಗಿದ್ದು, ರೋಗಿಗಳು ಚಿಕಿತ್ಸೆಗಾಗಿ ಪರದಾಡಿದರೂ ಅಚ್ಚರಿ ಪಡಬೇಕಿಲ್ಲ.

2004ರಲ್ಲಿ ಇಲ್ಲಿನ ಆಸ್ಪತ್ರೆಯು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೇಗೇರಿದೆ. ಮಕ್ಕಳ, ಹೆರಿಗೆ, ಅರವಳಿಕೆ, ದಂತ ತಜ್ಞರು ಹಾಗೂ ಆಡಳಿತ ವೈದ್ಯಾಧಿಕಾರಿ ಸೇರಿ 5 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಒಬಿಜಿ, ಎಂಬಿಬಿಎಸ್ ವೈದ್ಯರೊಬ್ಬರು ಬೇರೆಡೆಯಿಂದ ಇಲ್ಲಿಗೆ ನಿಯೋಜನೆಗೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಎನ್‌ಆರ್‌ಎಚ್‌ಎಂನಡಿ ಮಕ್ಕಳ ತಜ್ಞ, ಎನ್‌ಸಿಡಿ, ಎರವಲು ಸೇವೆ ಮೇಲೆ ಆಯುರ್ವೇದ ವೈದ್ಯರೊಬ್ಬರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಭಾರಿಯಾಗಿ ಮುಸಲಾಪುರದ ವೈದ್ಯರು ಈ ಆಸ್ಪತ್ರೆಗೆ ಆಡಳಿತ ವೈದ್ಯಾಧಿಕಾರಿಗಳಾಗಿದ್ದಾರೆ. ಕಾಯಂ ದಂತ ವೈದ್ಯರಿದ್ದರೂ ರಜೆ ಮೇಲೆ ತೆರಳಿದ್ದಾರೆ.

ಆದರೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಜು.8ರಂದು ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಕಾರ್ಯ ಹಂಚಿಕೆ ಪಡೆದ ಅಧಿಕಾರಿ ಅಥವಾ ನಿಯೋಜನೆಗೊಂಡ ಸಿಬ್ಬಂದಿಯ ಆದೇಶ ರದ್ದುಗೊಳಿಸಿ ಮೂಲ ಸ್ಥಾನಕ್ಕೆ ಹಾಜರಾಗಲು ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಕನಕಗಿರಿ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು. ಯಾಕೆಂದರೆ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಹುತೇಕ ವೈದ್ಯರು ನಿಯೋಜನೆಗೊಂಡವರು.

ಈಗಾಗಲೇ ಹರ್ಷ ಗುಪ್ತಾ ಅವರ ಆದೇಶ ಉಲ್ಲೇಖಿಸಿ ನೆರೆಯ ಬಳ್ಳಾರಿ ಜಿಲ್ಲೆಯ ಡಿಎಚ್‌ಒ, ನಿಯೋಜನೆಗೊಂಡವರನ್ನು ಮೂಲ ಸ್ಥಾನಕ್ಕೆ ತೆರಳುವಂತೆ ಜು.9ರಂದು ಆದೇಶಿಸಿದ್ದು, ಇದರ ಪ್ರತಿ ಈಗ ವೈರಲ್ ಆಗಿದೆ. ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಗೂ ಅನ್ವಯವಾಗುವ ಸಾಧ್ಯತೆಗಳಿರುವುದರಿಂದ ಇಲ್ಲಿನ ಆಸ್ಪತ್ರೆಗೆ ನಿಯೋಜನೆಗೊಂಡ ಇಬ್ಬರು ವೈದ್ಯರು ಮೂಲ ಸ್ಥಾನಕ್ಕೆ ತೆರಳಬೇಕಾಗುತ್ತದೆ. ಇಲ್ಲಿಗೆ ಬಂದಿದ್ದ ವೈದ್ಯರಿಗೆ ಪುನಃ ಮೂಲ ಸ್ಥಾನಕ್ಕೆ ತೆರಳಬೇಕಾಗುತ್ತದೆ. ತಾಲೂಕು ಕೇಂದ್ರವಾದ ಬಳಿಕ ಇಲ್ಲಿನ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ರೋಗಿಗಳು ವೈದ್ಯರಿಲ್ಲದೇ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ವರ್ಗಾವಣೆಯಲ್ಲಿಯೂ ಬಾರದ ತಜ್ಞರು

ರಜೆಯ ಮೇಲೆ ತೆರಳಿರುವ ದಂತ ವೈದ್ಯರನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ವೈದ್ಯರ ಹುದ್ದೆಗಳು ಈ ಆಸ್ಪತ್ರೆಯಲ್ಲಿ ಖಾಲಿಯಿವೆ. ಆದರೆ, ಇತ್ತೀಚೆಗೆ ಆರೋಗ್ಯ ಇಲಾಖೆಯಲ್ಲಿ ನಡೆದ ವರ್ಗಾವಣೆಯಲ್ಲಿ ಒಬ್ಬ ವೈದ್ಯರೂ ಆಯ್ಕೆ ಮಾಡಿಕೊಂಡಿಲ್ಲ. ಹೆರಿಗೆ ತಜ್ಞರಾಗಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಈಶ್ವರ ಸವಡಿ ಕನಕಗಿರಿ ಆಸ್ಪತ್ರೆಗೆ ಬರುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ, ಅವರು ಸೇರಿ ಇನ್ನುಳಿದ ಖಾಲಿ ಹುದ್ದೆಗಳಿಗೆ ಬೇರೆ ವೈದ್ಯರು ಆಯ್ಕೆ ಮಾಡಿಕೊಂಡಿಲ್ಲ. ಇದಕ್ಕೆ ಕಾರಣ ತಿಳಿದಿಲ್ಲ.

ಜು.8ರಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮುಖ್ಯ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಸೂಚಿಸಿದಂತೆ ಬಳ್ಳಾರಿಯಲ್ಲಿ ನಿಯೋಜನೆಗೊಂಡ ಸಿಬ್ಬಂದಿ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಗೂ ಅನ್ವಯವಾಗಬಹುದು. ಕನಕಗಿರಿಗೆ ಮತ್ತೋರ್ವ ವೈದ್ಯರನ್ನು ನೇಮಿಸಿದೆ. ಇಲಾಖೆಯು ಸ್ವಯಂ ಪ್ರೇರಿತವಾಗಿ ತಜ್ಞ ವೈದ್ಯರನ್ನು ನೇಮಿಸಲಿದೆ. ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. | ಟಿ.ಲಿಂಗರಾಜ ಡಿಎಚ್‌ಒ ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net