

ಕನಕಗಿರಿ: ತಾಲೂಕಿನ ಚಿರ್ಚನಗುಡ್ಡ ತಾಂಡಾದ ಗುಡ್ಡದ ಮಾರುತೇಶ್ವರ ದೇವಸ್ಥಾನದಲ್ಲಿನ ದೀಪಕ್ಕೆ ಹಾಕಿದ ಎಣ್ಣೆಯನ್ನು ಸವಿಯಲು ಕರಡಿಯೊಂದು ಬರುತ್ತಿರುವುದು ತಾಂಡಾ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ದೇವಸ್ಥಾನದ ಹತ್ತಿರ ಕರಡಿ ಕಾಣಿಸಿಕೊಂಡಿದೆ. ಶ್ರಾವಣ ಮಾಸದ ನಿಮಿತ್ತ ಮಾರುತೇಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಿ ದೀಪ ಬೆಳಗಿಸುತ್ತಾರೆ. ದೀಪಕ್ಕೆ ಎಣ್ಣೆ ಹೆಚ್ಚಾಗಿ ಸುರಿಯುತ್ತಿದ್ದು, ಇದನ್ನು ಸವಿಯಲು ಬರುತ್ತಿದೆ ಎನ್ನಲಾಗಿದೆ.
ಸಂಜೆ ವೇಳೆ ವಾಯು ವಿಹಾರಕ್ಕೆ ಹಾಗೂ ದೀಪ ಹಚ್ಚಲು ದೇವಾಲಯಕ್ಕೆ ತೆರಳುವ ಭಕ್ತರು ಕರಡಿ ದಾಳಿ ಮಾಡಿದರೆ ಎನ್ನುವ ಆತಂಕದಲ್ಲಿದ್ದಾರೆ. ತಾಂಡಾ ಸುತ್ತಲು ರೈತರು ಬೆಳೆದಿರುವ ಮೆಕ್ಕೆಜೋಳವನ್ನು ತಿಂದು ಕತ್ತಲಾಗುತ್ತಿದಂತೆ ದೇಗುಲಕ್ಕೆ ಬರುತ್ತಿದೆ. ದೇವಸ್ಥಾನದಲ್ಲಿ ವಾಸವಿರುವ ಒಬ್ಬ ಸಾಧು ಕರಡಿ ಬಂದು ಹೋಗುವುದನ್ನು ನೋಡಿದ್ದಾರೆ. ಆ.23 ಸಂಜೆ ವೇಳೆ ದೇಗುಲದತ್ತ ಕರಡಿ ಬಂದಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಆಗಿದ್ದು, ದೇವಸ್ಥಾನದ ಕಡೆಗೆ ಯಾರೂ ಹೋಗದಂತಾಗಿದೆ.
ರಾಂಪುರ ಬಳಿ ಕೆರೆಯ ಪಕ್ಕದ ದೇವಸ್ಥಾನಕ್ಕೆ ಎಣ್ಣೆಯನ್ನು ಸವಿಯಲು ಬರುತ್ತಿದ್ದ ಕರಡಿಯನ್ನು ಸ್ಥಳೀಯರು ದೇವಸ್ಥಾನದ ಗರ್ಭಗುಡಿಯಲ್ಲಿ ಕೂಡಿ ಹಾಕಿದ್ದರು. ಸ್ಥಳಾಂತರಿಸುವಾಗ ಅರಣ್ಯ ಇಲಾಖೆಯಿಂದ ನಡೆದ ಅಚಾತುರ್ಯದಿಂದ ಕರಡಿ ತಪ್ಪಿಸಿಕೊಂಡು ವ್ಯಕ್ತಿ ಮೇಲೆ ದಾಳಿ ಮಾಡಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮೃತಪಟ್ಟಿದ್ದರು. ಆದ್ದರಿಂದ ಈ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.