ಬಾಲ್ಯವಿವಾಹ ಮುಕ್ತ ತಾಲೂಕಿಗೆ ಶ್ರಮಿಸಿ

Untitled design (4)
ಕನಕಗಿರಿಯ ಸಿಡಿಪಿಒ ಕಚೇರಿಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧ ಸಭೆ ಗುರುವಾರ ನಡೆಯಿತು. ಸಿಡಿಪಿಒ ವಿರೂಪಾಕ್ಷಿ, ಮುಖ್ಯ ಪೇದೆ ಮುತ್ತಪ್ಪ, ಶಿಕ್ಷಣ ಸಂಯೋಜಕ ಆಂಜನೇಯ ಇತರರಿದ್ದರು.
Published on

ಕನಕಗಿರಿ: ಬಾಲ್ಯವಿವಾಹ ಮುಕ್ತ ತಾಲೂಕಾಗಿಸಲು ಎಲ್ಲ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರಡಿ ಹೇಳಿದರು.

ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧ ಮತ್ತು ಸಮನ್ವಯ ಸಮಿತಿ, ಮಹಿಳೆ ಮತ್ತು ಮಕ್ಕಳ ಸಾಗಣೆ ತಡೆ ಸಮಿತಿ ಹಾಗೂ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂಬ ಶಾಶ್ವತ ಗೋಡೆ ಬರಹ ಬರೆಸಲು ಕ್ರಮ ವಹಿಸಬೇಕು. ಸಾಮೂಹಿಕ ವಿವಾಹ ಆಯೋಜಕರು ಕಡ್ಡಾಯವಾಗಿ ತಹಸೀಲ್ದಾರರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲು ಸೂಚಿಸಬೇಕು. ಬಾಲ್ಯವಿವಾಹ ನಡೆಸುವುದು ಕಂಡುಬಂದಲ್ಲಿ, ಆಯೋಜಕರು, ಸಂಬಂಧಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರದ ಎಲ್ಲ ಯೋಜನೆಗಳ ಫಲಾನುಭವಿಗಳಿಂದ ನನ್ನ ಕುಟುಂಬದಲ್ಲಿ ಬಾಲ್ಯವಿವಾಹ ಮಾಡುವುದಿಲ್ಲ, ಬಾಲ್ಯವಿವಾಹಕ್ಕೆ ಅವಕಾಶ ನೀಡುವುದಿಲ್ಲ ಹಾಗೂ ಅಂತಹ ಬಾಲ್ಯವಿವಾಹದಲ್ಲಿ ಭಾಗಿಯಾಗುವುದಿಲ್ಲ, ತಪ್ಪಿದಲ್ಲಿ ನನಗೆ ನೀಡಿರುವ ಸರ್ಕಾರಿ ಸವಲತ್ತನ್ನು ಹಿಂಪಡೆಯಬಹುದಾಗಿದೆ ಎಂಬ ಮುಚ್ಚಳಿಕೆ ಪತ್ರ ಪಡೆಯುವುದು ಕಡ್ಡಾಯ. ನಕಲಿ ದಾಖಲೆ ಸಲ್ಲಿಸಿ ವಿವಾಹವಾಗುವುದು ಅಪರಾಧವಾಗಿದೆ ಎಂದರು.

ಮಕ್ಕಳಿಗೆ ಪೊಲೀಸ್ ಇಲಾಖೆಯ ಭಯ ನಿವಾರಣೆಗಾಗಿ ಗುರುವಾರ ತೆರೆದ ಮನೆ ನಡೆಸಲಾಗುತ್ತಿದೆ. ಕಡ್ಡಾಯವಾಗಿ ಅನುಷ್ಠ್ಠಾನಗೊಳಿಸಿ ವರದಿ ಸಲ್ಲಿಸಿ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚಿಸಿದರು. ಮಕ್ಕಳ ಮತ್ತು ಮಹಿಳೆಯರ ಭಿಕ್ಷಾಟಣೆ ತಡೆಗಟ್ಟಲು ಅನಿರೀಕ್ಷಿತ ದಾಳಿ ನಡೆಸುವುದು ಅನಿವಾರ್ಯವಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ನಿಯಮಿತವಾಗಿ ಅನಿರೀಕ್ಷಿತ ದಾಳಿ ನಡೆಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ, ಮಕ್ಕಳ ಸಹಾಯವಾಣಿ 1098ರ ಶರಣಪ್ಪ, ಮುಖ್ಯಪೇದೆ ಮುತ್ತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net