

ಕನಕಗಿರಿ: ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಆರಾಧ್ಯ ದೈವ ಪೂಜೇಶ್ವರ ತಾತ ಹಾಗೂ ಮರಿಯಮ್ಮ ದೇವರ ಜಾತ್ರೆ ನಿಮಿತ್ತ ಬುಧವಾರ ಸಂಜೆ ರಥೋತ್ಸವವು ವೈಭವದಿಂದ ನಡೆಯಿತು.
ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋಳಿಗೆ ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ದೇವಸ್ಥಾನ ಸಮಿತಿಗಳಿಂದ ದೇವರಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಸಂಜೆ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆದು ಸಂಭ್ರಮಿಸಿದರು. ಇನ್ನೂ ಗ್ರಾಮದ ಯುವಕರು ರಥಕ್ಕೆ ಬೃಹತ್ ಹೂವಿನಹಾರಗಳನ್ನು ಅರ್ಪಿಸಿದರು. ಭಕ್ತರಿಂದ ದೀರ್ಘದಂಡ ನಮಸ್ಕಾರ ಹಾಕಿ, ಹರಿಕೆ ತೀರಿಸಿದರು.