ಚಿದಾನಂದಾವಧೂತರ ಮಠಕ್ಕೆ ಸಾಧ್ವಿ ದೇವಪ್ರಿಯಾ ಭೇಟಿ: ಗರ್ಭಗುಡಿಯಲ್ಲಿ ವಿಶೇಷ ಪೂಜೆ, ದರ್ಶನ

28knk1 (2)
Published on

ಕನಕಗಿರಿ: ಇಲ್ಲಿನ ವಾರದ ಸಂತೆ ಪ್ರದೇಶದಲ್ಲಿರುವ ಚಿದಾನಂದ ಅವಧೂತರ ಮಠಕ್ಕೆ ಪತಂಜಲಿ ಯೋಗ ಸಮಿತಿ ಮುಖ್ಯಕೇಂದ್ರ ಕಚೇರಿಯ ಪ್ರಭಾರಿ ಸಾಧ್ವಿ ದೇವಪ್ರಿಯಾ ಬುಧವಾರ ಭೇಟಿ ನೀಡಿ ದರ್ಶನ ಪಡೆದರು.

ಪಟ್ಟಣದಲ್ಲಿ ಜೀವಂತ ಸಮಾಧಿಯಾಗಿರುವ ದೇವಿ ಪುರಾಣದ ಕರ್ತೃ ಹಾಗೂ ಅವಧೂತ ಪರಂಪರೆಯ ಕೊಂಡಿಯಾದ ಶ್ರೀ ಚಿದಾನಂದಾ ಅವಧೂತರ ಮೂಲ ಗದ್ದುಗೆಗೆ 2021ರ ಅ.24ರಂದು ಯೋಗ ಗುರು ರಾಮದೇವ ಭೇಟಿ ನೀಡಿ ದರ್ಶನ ಪಡೆದಿದ್ದರು. ಅವಧೂತರ ಹಿನ್ನೆಲೆ ತಿಳಿದ ಸಾಧ್ವಿ ದೇವಪ್ರಿಯಾ, ಬುಧವಾರ ವಿಮಾನದ ಮೂಲಕ ಜಿಂದಾಲ್‌ಗೆ ಬಂದಿಳಿದಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಶಕ್ತಿ ದೇವತೆಯ ಪೀಠವಾದ ಅಂಬಾಮಠಕ್ಕೆ ಭೇಟಿ ನೀಡಿದ ಬಳಿಕ ಪಟ್ಟಣದ ಚಿದಾನಂದರ ಮಠಕ್ಕೆ ಆಗಮಿಸಿದ್ದಾರೆ. ಸ್ಥಳೀಯರು ಮಠದ ಹಿನ್ನೆಲೆ ಹೇಳಲು ಮುಂದಾದಾಗ ಮಾಹಿತಿ ಗೊತ್ತು ಎಂದು ಕನ್ನಡದಲ್ಲೇ ಹೇಳಿ ಮಠದ ಗರ್ಭಗುಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಬಳಿಕ ಕನಕಾಚಲ ದೇವಸ್ಥಾನಕ್ಕೆ ತೆರಳಿ ಕನಕರಾಯನ ಆಶೀರ್ವಾದ ಪಡೆದರು. ದೇವಸ್ಥಾನದಲ್ಲಿ ಚಿದಾನಂದಾವಧೂತರು ಕನಕಗಿರಿಯ ನಾಯಕರೊಂದಿಗಿನ ಮಧ್ಯ ರಂಗಮಂಟಪದಲ್ಲಿ ಚರ್ಚಿಸುವ ಕಲಾಕೃತಿಗಳನ್ನು ವೀಕ್ಷಿಸಿ ಸಂತಸಪಟ್ಟರು. ನಂತರ ಹಂಪಿಯತ್ತ ತೆರಳಿದರು.

ಪತಂಜಲಿ ಯೋಗ ಸಮಿತಿಯ ಪ್ರಮುಖರಾದ ಆರತಿ ಕಾನಗೂರು, ಸುಜಾತಾ ಮಾರಲಾ, ಯೋಗಾಚಾರ್ಯ ಭವರಲಾಲ್ ಆರ್ಯ, ಯೋಗ ಸಾಧಕ ಬಾಲಚಂದ್ರ ಶರ್ಮಾ, ಜಿಲ್ಲಾ ಪ್ರಭಾರಿ ಮೀನಾಕ್ಷಿ ಶರಣಪ್ಪ, ಎಲ್‌ವಿಟಿ ಸಂಸ್ಥೆಯ ಸೂಗಪ್ಪ, ಸ್ಥಳೀಯರಾದ ಮಹಾಬಲೇಶ್ವರ ಸಜ್ಜನ, ಶೇಖರಗೌಡ ಪಾಟೀಲ್, ಗುರುಸಿದ್ದಪ್ಪ ಹಾದಿಮನಿ, ಸಿದ್ದಲಿಂಗಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net