

ಕನಕಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ನೀತಿಯಿಂದ ರೈತರು, ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಸ್ಥರು ಬೀದಿಗೆ ಬರುವಂತಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಡಿ.ಎಚ್. ಪೂಜಾರ ಹೇಳಿದರು.
ರೈತ ವಿರೋಧಿ ಕೃಷಿ ಕಾಯ್ದೆಗಳ ತಿದ್ದುಪಡಿ ರದ್ದತಿಗಾಗಿ ಒತ್ತಾಯಿಸಿ ನ.26ರಂದು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಹಾಗೂ ನ.15ರಿಂದ 25ರವರೆಗೆ ನಡೆಯುತ್ತಿರುವ ಜಾಗೃತಿ ನಿಮಿತ್ತ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು.
ವಿದೇಶಿ ಕಂಪನಿಗಳ ಮಾಲ್ ಸಂಸ್ಕೃತಿ, ಆನ್‌ಲೈನ್ ವ್ಯವಹಾರದಿಂದ ಸ್ಥಳೀಯ ದಿನಸಿ, ಬಟ್ಟೆ, ಪಾದರಕ್ಷೆ, ಹೋಟೆಲ್ ವ್ಯಾಪಾರ ಮಾಡುತ್ತಿರುವವರು ಬೀದಿಗೆ ಬರುವಂತಾಗಿದೆ. ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಕೃಷಿ ನೀತಿಗಳನ್ನು ಈಡೇರಿಸಲು ಮುಂದಾಗಿಲ್ಲ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಇಂತಹ ಹತ್ತಾರು ಸಮಸ್ಯೆ ಮೇಲೆ ಬೆಳಕು ಚಲ್ಲಲು ನ.26ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ್ ಮೂಲಿಮನಿ, ತಾಲೂಕು ಅಧ್ಯಕ್ಷ ಗಣೇಶರೆಡ್ಡಿ, ಹೋರಾಟಗಾರರಾದ ಸಣ್ಣ ಹನುಮಂತ, ಸಗರಪ್ಪ ಕಂಪ್ಲಿ, ಕರಿಯಪ್ಪ ಗುಡಿಮನಿ, ಕಾಂತಯ್ಯಸ್ವಾಮಿ ಇತರರಿದ್ದರು.