ಬಾಲ್ಯವಿವಾಹ ಕಂಡುಬಂದರೆ ಕರೆ ಮಾಡಿ

emergency meeting
ಕನಕಗಿರಿ ತಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತುರ್ತು ಸಭೆಯಲ್ಲಿ ತಾ ಪಂ ಇಒ ರಾಜಶೇಖರ್, ಸಿಡಿಪಿಒ ವಿರೂಪಾಕ್ಷಿ, ಪಪಂ ಮುಖ್ಯಧಿಕಾರಿ ದತ್ತಾತ್ರೇಯ ಹೆಗಡೆ ಇದ್ದರು.
Published on

ಕನಕಗಿರಿ: ಬಾಲ್ಯ ವಿವಾಹ ನಡೆಯದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಿಡಿಪಿಒ ವಿರೂಪಾಕ್ಷಿ ಹೇಳಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಕರೆಯಲಾಗಿದ್ದ ಬಾಲ್ಯ ವಿವಾಹ ತಡೆ, ಘನತಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳ ಒದಗಿಸುವ ಹಾಗೂ ಕುಡಿವ ನೀರಿನ ತುರ್ತು ಸಭೆಯಲ್ಲಿ ಮಾತನಾಡಿದರು.

ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಬಾಲ್ಯ ವಿವಾಹ ಕುರಿತು ಎರಡು ಪ್ರಕರಣ ದಾಖಲಾಗಿವೆ. ಇವು ಕೇವಲ ಸಿಡಿಪಿಒ ಇಲಾಖೆಗೆ ಸಂಬಂಧಿಸಿಲ್ಲ. ಪ್ರತಿ ಇಲಾಖೆಯವರು ನಿಮ್ಮ ವ್ಯಾಪ್ತಿಯಲ್ಲಿ ಪ್ರಕರಣಗಳು ಕಂಡುಬಂದರೇ ಕೂಡಲೇ ಕ್ರಮಕೈಗೊಳ್ಳಬೇಕು. ಬಾಲ್ಯವಿವಾಹ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 1098 ಅಥವಾ 112 ಕರೆ ಮಾಡಿ ತಿಳಿಸಬೇಕು ಎಂದರು.

ಬಾಲ್ಯ ವಿವಾಹ ನಿಷೆೇಧ ಅಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಸಾಮೂಹಿಕ ಮತ್ತು ವೈಯಕ್ತಿಕ ವಿವಾಹ ಮಾಹಿತಿ, ವಧು ವರರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಬಾಲ್ಯ ವಿವಾಹ ನಡೆಯದಂತೆ ನಿಯಮಾನುಸಾರ ಕಾರ್ಯ ಪ್ರವೃತ್ತರಾಗಬೇಕು ಎಂದರು.

ತಹಸೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿ, ಮಕ್ಕಳ ಮೇಲಾಗುವ ದೌರ್ಜನ್ಯ ತಡೆಗಟ್ಟಲು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ, ಇಲಾಖೆಗಳ ಗಮನಕ್ಕೆ ಬಾರದಂತೆ ಬಾಲ್ಯ ವಿವಾಹಗಳು ನಡೆಯುತ್ತಿವೆ. ತಾಲೂಕಿನ ಎಲ್ಲ ವಲಯ, ಗ್ರಾಮ ಮಟ್ಟದಲ್ಲಿರುವ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮಗಳ ಮೂಲಕ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಹನುಮಂತಪ್ಪ, ರವಿಕುಮಾರ, ಪಿಡಿಒಗಳಾದ ಲಕ್ಷ್ಮಣ, ಬಸವರಾಜ, ನಾಗಲಿಂಗಪ್ಪ, ಹನುಮಂತಪ್ಪ, ಇಸಿಒ ಆಂಜನೇಯ ಇತರರಿದ್ದರು.

ಸಮಸ್ಯೆ ಆಲಿಸಿದ ತಹಸೀಲ್ದಾರ್: ತಾಲೂಕಿನ ಕನಕಾಪುರದಲ್ಲಿ ಕುಡಿವ ನೀರಿಗಾಗಿ ಕೊರೆಯಿಸಿದ್ದ ಬೋರ್‌ವೆಲ್ ಅಂತರ್ಜಲ ಕುಸಿದಿದ್ದರಿಂದ ನೀರಿನ ಸಮಸ್ಯೆಯಾಗಿದೆ ಎಂದು ಹುಲಿಹೈದರ ಗ್ರಾಪಂ ಸಿಬ್ಬಂದಿ ಶ್ರೀನಿವಾಸ ತಿಳಿಸಿದರೆ, ಚಿಕ್ಕ ಮಾದಿನಾಳದಲ್ಲೂ ಮೂರು ಬಾಡಿಗೆ ಬೋರ್‌ವೆಲ್ ಪಡೆದಿದ್ದರೂ ನೀರಿನ ಅಭಾವ ನೀಗಿಲ್ಲ. ಬಸರಿಹಾಳದಲ್ಲೂ ಇದೇ ಸಮಸ್ಯೆ ಎಂದು ಪಿಡಿಒ ಬಸವರಾಜ ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ವಿಶ್ವನಾಥ ಮುರುಡಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಡಿಸಿ ಆದೇಶದಂತೆ ಘನತಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳ ಒದಗಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net