

ಕನಕಗಿರಿ: ನರೇಗಾ ಯೋಜನೆಯಡಿ ನಿರ್ಮಿಸಿಕೊಂಡ ದನದ ಶೆಡ್‌ನ ಅನುದಾನ ಮಂಜೂರು ಮಾಡದಿರುವುದನ್ನು ಖಂಡಿಸಿ ಶುಕ್ರವಾರ ತಾಲೂಕಿನ ಗೌರಿಪುರ ಗ್ರಾಪಂ ಕಚೇರಿ ಮುಂದೆ ಫಲಾನುಭವಿಗಳು ದನಗಳನ್ನು ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
2023-24 ಹಾಗೂ 2024-25ನೇ ಸಾಲಿನಲ್ಲಿ ದನದ ಶೆಡ್ ನಿರ್ಮಿಸಿಕೊಂಡಿದ್ದು, ಇದುವರೆಗೂ ಅನುದಾನ ಮಂಜೂರಾಗಿಲ್ಲ. ನಮಗಿಂತ ತಡವಾಗಿ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಣ ಮಂಜೂರು ಮಾಡಲಾಗಿದೆ. ನಾವು ದೊಡ್ಡಿ ನಿರ್ಮಿಸಿಕೊಂಡು ಮೂರು ವರ್ಷವಾದರೂ ಅನುದಾನ ಮಂಜೂರಾಗಿಲ್ಲ. ಇದನ್ನು ಪ್ರಶ್ನಿಸಿ ಗ್ರಾಪಂ, ತಾಪಂ ಕಚೇರಿಗೆ ಭೇಟಿ ನೀಡಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಮರೇಶ ವಂಕಲಕುಂಟಿ, ದ್ಯಾಮಪ್ಪ ದೂರಿದರು.
ಇದೀಗ ಗ್ರಾಪಂ ಸಿಬ್ಬಂದಿ ಬಿಒಸಿ ವಿಚಾರವಾಗಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಮುಂದಿನ ತಿಂಗಳಲ್ಲಿ ಗ್ರಾಪಂ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತೆ. ಅನುದಾನ ನೀಡುವುದು ಗ್ಯಾರಂಟಿಯಿಲ್ಲ. ಜಿಪಂ ಸಿಇಒ ಪಂಚಾಯತಿಗೆ ಭೇಟಿ ನೀಡಿ ಬಾಕಿ 22 ಫಲಾನುಭವಿಗಳ ದನದ ದೊಡ್ಡಿಯ ಅನುದಾನ ಪಾವತಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಗ್ರಾಪಂ ಕಾರ್ಯದರ್ಶಿ ಶಿವರಾಜ ಪಾಟೀಲ್ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಪ್ರತಿಭಟನಾಕಾರರು ಜಗ್ಗಲಿಲ್ಲ. ಪ್ರಮುಖರಾದ ಗ್ಯಾನಪ್ಪ ವರ್ನಖೇಡ, ಹನುಮಂತ ಮುದಗಲ್, ದೇವಪ್ಪ ಜೀರಾಳ, ಯಮನೂರಪ್ಪ ಜೀರಾಳ ಇತರರಿದ್ದರು.
2024-25ನೇ ಸಾಲಿನಲ್ಲಿ ದನದ ದೊಡ್ಡಿ ನಿರ್ಮಾಣಕೊಂಡವರ ಕಾಮಗಾರಿ ಪರಿಶೀಲಿಸಿ ಮಾರ್ಚ್‌ನಲ್ಲಿ ಕೂಲಿ ಹಣ ಮಂಜೂರು ಮಾಡಲಾಗಿರುತ್ತದೆ. ಇಬ್ಬರು ಫಲಾನುಭವಿಗಳ ಪೈಕಿ ಒಬ್ಬರಿಗೆ ಕೂಲಿ ಹಣ ಜಮೆಯಾಗಿದ್ದು, ಇನ್ನೊಬ್ಬರಿಗೆ ಜಮೆ ಆಗದಿರುವ ಬಗ್ಗೆ ತಾಪಂ ಇಒಗೆ ಪತ್ರ ಬರೆಯಲಾಗಿದೆ. ಅವರು ಜಿಪಂ ಸಿಇಒಗೆ ಪತ್ರ ಬರೆದಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಯಲಾಗುವುದು. ಸಾಮಗ್ರಿ ಮೊತ್ತ ಪಾವತಿಸುವುದಕ್ಕಾಗಿ ತಾಪಂ ಗೂಗಲ್ ಫಾರಂನಲ್ಲಿ ಭರ್ತಿ ಮಾಡಲಾಗಿದ್ದು, ಶೀಘ್ರ ಮಂಜೂರಾಗಲಿದೆ.
ಹನುಮಂತಪ್ಪ
ಪಿಡಿಒ, ಗೌರಿಪುರ ಗ್ರಾಪಂ