

ಕನಕಗಿರಿ: ಒಳ ಮೀಸಲಾತಿಗಾಗಿ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ನಕಲಿ ಬೇಡ ಜಂಗಮರನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಶನಿವಾರ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಲಾಯಿತು.
ಹಲವು ವರ್ಷಗಳ ಅಸ್ಪಶ್ಯ ಜಾತಿ, ಜನಾಂಗದ ಹೋರಾಟದ ಫಲವಾಗಿ ಇದೀಗ ನ್ಯಾಯ ದೊರಕುವ ಕಾಲ ಕೂಡಿಬಂದಿದೆ. ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಏಕ ಸದಸ್ಯ ಪೀಠ ಆಯೋಗದ ಅಧ್ಯಕ್ಷ ನ್ಯಾ.ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಗಣತಿ ನಡೆಯುತ್ತಿದೆ. ಆದರೆ, ರಾಜ್ಯದಲ್ಲಿ ವೀರಶೈವ ಲಿಂಗಾಯತ ನಕಲಿ ಬೇಡ ಜಂಗಮರು ಜಾತಿ ಸಮೀಕ್ಷೆಯಲ್ಲಿ ತಾವುಗಳು ಬೇಡ ಜಂಗಮರು, ಪರಿಶಿಷ್ಟ ಜಾತಿಗೆ ಸೇರಿದವರು ಎಂದು ನೋಂದಾಯಿಸುತ್ತಿದ್ದಾರೆ. ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಕೂಲಂಕಷವಾಗಿ ಪರಿಶೀಲಿಸಿ ಸಮೀಕ್ಷೆಯಲ್ಲಿ ಸೇರಿಸಬೇಕು ಹಾಗೂ ನಕಲಿ ಬೇಡ ಜಂಗಮರನ್ನು ಸಮೀಕ್ಷೆಯಿಂದ ತೆಗೆದು ಹಾಕಬೇಕು. ನಕಲಿ ಬೇಡ ಜಂಗಮರನ್ನು ಸೇರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು.
ಪ್ರಾಕೃಪಸ ಸಂಘದ ಅಧ್ಯಕ್ಷ ಕನಕಪ್ಪ ಛಲವಾದಿ, ಪಪಂ ಸದಸ್ಯ ಶೇಷಪ್ಪ ಪೂಜಾರ, ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಸದಸ್ಯ ಸುಭಾಷ ಕಂದಕೂರು, ಸಂಘಟನೆಯ ಪದಾಧಿಕಾರಿಗಳಾದ ಪಾಮಣ್ಣ ಅರಳಿಗನೂರು, ನಿಂಗಪ್ಪ ಪೂಜಾರ, ಶಾಂತಪ್ಪ ಬಸರಿಗಿಡ, ಮಂಜುನಾಥ, ಕನಕಪ್ಪ ಮ್ಯಾಗಡೆ, ಉಮೇಶ ಮ್ಯಾಗಡೆ ಇತರರಿದ್ದರು.