ಬಸ್‌ಗಾಗಿ ಪ್ರಯಾಣಿಕರ ಪರದಾಟ

Kanakagiri bus problem
ಕನಕಗಿರಿಯ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಮುಗಿಬಿದ್ದಿರುವುದು.
Published on

ಕನಕಗಿರಿ: ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಿಎಂ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯಲು ಜಿಲ್ಲೆಯ ಬಹುತೇಕ ಸರ್ಕಾರಿ ಬಸ್‌ಗಳನ್ನು ಬಳಸಿಕೊಂಡಿದ್ದರಿಂದ ಪಟ್ಟಣದಲ್ಲಿ ಸೋಮವಾರದಂದು ಪ್ರಯಾಣಿಕರು ಪರದಾಡಿದರು.

ಪಟ್ಟಣದಲ್ಲಿ ಸೋಮವಾರ ವಾರದ ಸಂತೆ ನಡೆಯುತ್ತದೆ. ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಸಂತೆಯಲ್ಲಿ ದಿನಸಿ, ತರಕಾರಿ ಸೇರಿ ಇತರೇ ವಸ್ತುಗಳ ಖರೀದಿಗೆ ಬರುತ್ತಾರೆ. ಆದರೆ, ಬಸ್‌ಗಳ ಸಂಚಾರ ವಿರಳವಾಗಿದ್ದರಿಂದ ಪ್ರಯಾಣಕ್ಕೆ ಸಮಸ್ಯೆ ಅನುಭವಿಸುವಂತಾಗಿತ್ತು. ಬಸ್ಸುಗಳು ಇಲ್ಲದಿದ್ದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುವುದಕ್ಕೆ ಹರಸಾಹಸಪಟ್ಟರು. ಕೆಲ ಲೋಕಲ್ ಬಸ್‌ಗಳು ಮಾತ್ರ ಸಂಚರಿಸಿದ್ದು, ಕೊಪ್ಪಳ-ಕನಕಗಿರಿ, ಗಂಗಾವತಿ-ಕುಷ್ಟಗಿ, ವಿಜಯಪುರ-ಗಂಗಾವತಿ ಸೇರಿ ಪಟ್ಟಣದ ಮೂಲಕ ಸಂಚರಿಸುವ ಹಲವು ಬಸ್‌ಗಳ ಓಡಾಟ ರದ್ದಾಗಿದ್ದವು. ದಿನನಿತ್ಯ ನಾನಾ ಕಡೆಗಳಿಂದ 227 ಟ್ರಿಪ್‌ಗಳು ಕನಕಗಿರಿ ಮಾರ್ಗವಾಗಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಸೋಮವಾರ 100 ಟ್ರಿಪ್‌ಗಳು ಸಹ ಸಂಚರಿಸಿಲ್ಲವಾದ್ದರಿಂದ ನಾನಾ ಕಡೆಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಪರದಾಡುವಂತಾಗಿದ್ದು, ಬಸ್ಸಿಗಾಗಿ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ಕುಳಿತಿದ್ದು, ಸಂಚಾರ ರದ್ದಾಗಿದ್ದಕ್ಕೆ ಹಿಡಿಶಾಪ ಹಾಕಿದರು.

ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತೆರಳುವವರು, ವೃದ್ಧರು, ಅಂಗವಿಕಲರು, ಬಸ್ಸುಗಳು ಪ್ರಯಾಣಿಕರಿಂದ ತುಂಬಿದ್ದರಿಂದ ಹತ್ತಲಾಗದೇ ಅನಿವಾರ್ಯವಾಗಿ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಕೆಲವರು ಮನೆ ಕಡೆಗೆ ತೆರಳಿದರೆ, ಕೆಲವರು ಖಾಸಗಿ ವಾಹನಗಳಲ್ಲಿ ತೆರಳಿದರು. ಇದುವರೆಗೂ ಶಕ್ತಿ ಯೋಜನೆಯಡಿ ಆಧಾರ್ ಕಾರ್ಡ್ ತೋರಿಸಿ ಬಸ್ಸುಗಳಲ್ಲಿ ಸಂಚರಿಸುತ್ತಿದ್ದ ಮಹಿಳಾ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ದುಡ್ಡು ಕೊಟ್ಟು ಸಂಚರಿಸಿದರು.

ಜನರನ್ನು ಕರೆ ತರಲು ಹರಸಾಹಸ

ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ಪಂಚ ಗ್ಯಾರಂಟಿಗಳ ಫಲಾನುಭವಿಗಳನ್ನು ಸಿಎಂರ ಕಾರ್ಯ ಕ್ರಮಕ್ಕೆ ಕರೆದೊಯ್ಯಲು ಪ್ರಮುಖ ಸ್ಥಳಗಳಲ್ಲಿ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರು ಸೇರಿ ತಾಪಂ, ಗ್ರಾಪಂ, ಪಪಂನ ಸಿಬ್ಬಂದಿ ಫಲಾನುಭವಿಗಳನ್ನು ಕರೆ ತರಲು ಮನೆ ಮನೆಗೆ ತೆರಳಿದ್ದರೆ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಹ ಬಸ್‌ಗಳಿಗೆ ಜನರನ್ನು ಕರೆ ತರಲು ಓಡಾಡುತ್ತಿರುವುದು ಸಾಮಾನ್ಯವಾಗಿತ್ತು. ಕಾರ್ಯಕ್ರಮಕ್ಕೆ ಬರುವ ಫಲಾನುಭವಿಗಳಿಗೆ ಉಪಾಹಾರದ ಪೊಟ್ಟಣ, ನೀರಿನ ಬಾಟಲ್ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net