ತಳ ಸಮುದಾಯಗಳ ಅಭಿವೃದ್ಧಿಗೆ ಕೊಕ್ಕೆ

PROTEST
ಕನಕಗಿರಿ ವಾಲ್ಮೀಕಿ ವೃತ್ತದಲ್ಲಿ ಡಿಕೆಶಿ ಹೇಳಿಕೆ ಖಂಡಿಸಿ ಬಿಜೆಪಿ ಮಂಡಲದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಶಿವಕುಮಾರ ಕೋರಿ, ದೊಡ್ಡಬಸವ ಹಿರೇಖೇಡ, ನಾಗರಾಜ ತೆಗ್ಯಾಳ ಇತರರಿದ್ದರು.
Published on
ಕನಕಗಿರಿ: ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಅವಶ್ಯವಿದ್ದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ ಹೇಳಿಕೆ ಖಂಡಿಸಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ರಾಜ್ಯ ಸರ್ಕಾರ ಮತ ಬ್ಯಾಂಕ್‌ಗಾಗಿ ಮುಸ್ಲಿಮರ ಓಲೈಕೆಗೆ ನಿಂತಿದೆ. ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಸಂವಿಧಾನದಡಿ ಜನಪರ ಕೆಲಸ ನಡೆಯುತ್ತಿದೆ. ಆದರೆ, ಡಿಸಿಎಂ ಅಸಂವಿಧಾನಿಕ ಹೇಳಿಕೆ ನೀಡುವ ಮೂಲಕ ತಳ ಸಮುದಾಯಗಳ ಅಭಿವೃದ್ಧಿಗೆ ಕೊಕ್ಕೆ ಹಾಕಲು ಹೊರಟಿದ್ದಾರೆ. ಇದನ್ನು ಕರ್ನಾಟಕದ ಜನ ಸಹಿಸುವುದಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆ ಎಂದರು.
ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಸಜ್ಜನ್ ಮಾತನಾಡಿ, ಹಿಂದೆ ಬಿಜೆಪಿ ಮಾಜಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನದಲ್ಲಿ ತಿದ್ದುಪಡಿ ಅವಶ್ಯವಿದೆ ಎಂದಿದ್ದಾಗ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ತನ್ನ ಲಾಭಕ್ಕಾಗಿ ದೇಶಾದ್ಯಂತ ಹೋರಾಟ ನಡೆಸಿತ್ತು. ಇದೀಗ ಡಿಕೆಶಿ ಹೇಳಿಕೆ ವಿರುದ್ಧ ತುಟಿ ಬಿಚ್ಚದಿರುವುದು ಕಾಂಗ್ರೆಸ್‌ನವರಿಗೆ ಸಂವಿಧಾನದ ಮೇಲಿನ ಇರುವ ನಂಬಿಕೆ ಏನು ಎಂದು ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಡಿಸಿದರು.
ಬಿಜೆಪಿ ಮಂಡಲ ಕಚೇರಿಯಿಂದ ವಾಲ್ಮೀಕಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪಪಂ ಸದಸ್ಯ ಶೇಷಪ್ಪ ಪೂಜಾರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಾಗೀಶ ಹಿರೇಮಠ, ರಾಜಾ ಶರತ್‌ಚಂದ್ರ ನಾಯಕ, ಮಂಡಲ ಕಾರ್ಯದರ್ಶಿ ಗ್ಯಾನಪ್ಪ ನಾಯಕ, ನಿಂಗಪ್ಪ ನಾಯಕ ನವಲಿ, ಶಿವಯ್ಯಸ್ವಾಮಿ ನವಲಿ, ಭೀಮನಗೌಡ ಹರ್ಲಾಪುರ, ಹನುಮಂತರೆಡ್ಡಿ ಮಹಲಿನಮನಿ, ಸುರೇಶ ಕುರುಗೋಡ, ಪೃಥ್ವಿ ಮ್ಯಾಗೇರಿ, ಶಿವಕುಮಾರ ಕೋರಿ, ಹರೀಶ ಪೂಜಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net