ಜೀವನ ಸಾರ್ಥಕವಾಗುವಂತೆ ಬದುಕಿ

Spiritual Discourse
ಕನಕಗಿರಿ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಲ್ಲಿ ಭಾನುವಾರ ಪುಟ್ಟರಾಜ ಶಾಸ್ತ್ರಿಗಳು ಪ್ರವಚನ ನೀಡಿದರು. ಡಾ. ಚನ್ನಮಲ್ಲ ಸ್ವಾಮೀಜಿ, ಹಾರ್ಮೋನಿಯಂ ವಾದಕರಾದ ದೇವರಾಜ್ ಯರಕಿಹಾಳ, ತಬಲಾವಾದಕರಾದ ಪ್ರತಾಪ ಹಿರೇಮಠ ಇದ್ದರು.
Published on

ಕನಕಗಿರಿ: ಕಪ್ಪು ವರ್ಣದವರು ಹಾಗೂ ಭಾರತೀಯರಿಗೆ ಹೋಟೆಲ್‌ಗೆ ಪ್ರವೇಶ ನೀಡದ ಇಂಗ್ಲೆಂಡ್ ದೇಶದವರ ವಿರುದ್ಧ ಸಿಟ್ಟಾಗಿದ್ದ ಟಾಟಾ ತಾನೇ ಹೋಟೆಲ್ ಕಟ್ಟಿಸಿ ಅದೇ ಇಂಗ್ಲೇಡ್‌ನವರನ್ನೇ ದುಡಿಯಲು ಇಟ್ಟುಕೊಳ್ಳುವಷ್ಟು ಸಾಧಿಸಿ ಸ್ವಾಭಿಮಾನ ಮೆರೆದ ರೀತಿಯಲ್ಲಿ ಬದುಕಬೇಕು ಎಂದು ಪ್ರವಚನಕಾರ ಚುರ್ಚಿಹಾಳದ ಪುಟ್ಟರಾಜ ಶಾಸ್ತ್ರಿ ಹೇಳಿದರು.

ಬಸವ ಜಯಂತಿ ನಿಮಿತ್ತ ಸುವರ್ಣಗಿರಿ ಸಂಸ್ಥಾನ ಮಠದಿಂದ ಕಳೆದೊಂದು ತಿಂಗಳಿಂದ ಆರಂಭವಾದ ಆಧ್ಯಾತ್ಮಿಕ ಪ್ರವಚನದ ಭಾಗವಾಗಿ ಭಾನುವಾರದಿಂದ ಆರಂಭವಾದ ಪ್ರವಚನದಲ್ಲಿ ಮಾತನಾಡಿದರು.

1902ರಲ್ಲಿ ಜೇಮ್ಶೆಡ್‌ಜೀ ಟಾಟಾ ಇಂಗ್ಲೆಂಡ್‌ಗೆ ಹೋಗಿ ದೊಡ್ಡ ಹೋಟೆಲ್ಗೆ ಹೋಗಿದ್ದಾಗ ನಮ್ಮ ದೇಶದ, ಕರಿಯರಿಗೆ ಉಪಹಾರ, ಚಹಾ, ಊಟ ನೀಡುವುದಿಲ್ಲ ಎಂದು ಅವಮಾನಿಸಿದಾಗ ಬೇರೊಂದು ಹೋಟೆಲ್ಗೆ ತೆರಳದೆ ದೇಶಕ್ಕೆ ಬಂದು ತಾಜ್ ಹೋಟೆಲ್ ಕಟ್ಟಿ ಅದೇ ಇಂಗ್ಲೆಂಡ್‌ನವರು ನೋಡೋಕೆ ಬರುವ ಹಾಗೇ ಮಾಡಿದರಲ್ಲದೆ, ಇಂಗ್ಲೆಂಡ್‌ನವರನ್ನು ದುಡಿಯಲು ಇಟ್ಟುಕೊಂಡರು. ಆ ರೀತಿ ಮನುಷ್ಯ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಹಣ, ಬಂಗಾರ, ಅಧಿಕ್ಕಾರಕ್ಕಾಗಿ ಮನುಷ್ಯ ಯಾವ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯುತ್ತಿದ್ದಾನೆ. ಇವುಗಳ ಹಿಂದೆ ಬಿದ್ದು ಸತ್ತವರು ಕೋಟಿಗಟ್ಟಲೆ ಇದ್ದಾರೆ ಎನ್ನುವುದು ಅವರು ತಿಳಿದಿಲ್ಲ. ಅದಕ್ಕಾಗಿ ಹುಟ್ಟಿದ ಮನುಷ್ಯನ ಜೀವನ ಸಾರ್ಥಕವಾಗುವಂತೆ ಬದುಕಬೇಕು. ವಿಐಪಿಗಳಿಗೆ ಟೇಬಲ್ ಮೇಲೆ ಕೂಡಿಸಿ ಊಟ ನೀಡುವ ಬದಲು ಮನೆಗೆ ಬಂದ ಜಂಗಮರಿಗೆ ಪ್ರಸಾದ ನೀಡಿದರೇ, ಅವರು ನಿಮ್ಮ ಕುಟುಂಬ ಸುಭಿಕ್ಷವಾಗಿರಲಿ ಎಂದು ಹರಸುತ್ತಾರೆ ಎಂದರು.

ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಡಾ. ಚನ್ನಮಲ್ಲ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಹಿರಿಯರು ಕುಟುಂಬಕ್ಕಾಗಿ ಬದುಕಿದ್ದರಿಂದ ಅವರ ಹೆಸರು ಉಳಿಯಲಿಲ್ಲ. ಆದರೆ, ಶಂಕರಾಚಾರ್ಯ, ಗಾಂಧೀಜಿ, ಬುದ್ಧ, ಬಸವಣ್ಣನವರು ಸಮಾಜಕ್ಕಾಗಿ ದುಡಿದರು. ಇದರಿಂದ ಅವರ ಹೆಸರುಗಳು ಅಜರಾಮರವಾಗಿವೆ. ಅದರಂತೆ ನಾವು ಮುಂದಿನ ಪೀಳಿಗೆ ನಮ್ಮನ್ನು ನೆನಪಿಟ್ಟುಕೊಳ್ಳುವಂತೆ ಬದುಕಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net