

ಕನಕಗಿರಿ: ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದ ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯಿತಿಯಲ್ಲಿನ ಮಳೆ ನೀರು ಕೊಯ್ಲು ಘಟಕದ ನೀರು ಶುದ್ಧೀಕರಣ ತೊಟ್ಟಿ ಹಾಗೂ ಸಂಪ್ ಅನ್ನು ಸಿಬ್ಬಂದಿ ಮಂಗಳವಾರ ಸ್ವಚ್ಛಗೊಳಿಸಿದ್ದಾರೆ.
ಈ ಕುರಿತು ಏ.2ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಮಳೆ ನೀರು ಕೊಯ್ಲು ಘಟಕ ನಿರರ್ಥಕ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಮಾಡಳಿತ, ನೀರು ಶುದ್ದೀಕರಣ ತೊಟ್ಟಿ, ಸಂಪ್ ಸ್ವಚ್ಛಗೊಳಿಸಿದೆ.
ಉಪಯೋಗ ಮಾಡುತ್ತಾರಾ?: ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಬಳಿಕ ತೊಟ್ಟಿ ಹಾಗೂ ಸಂಪ್ ಸ್ವಚ್ಛಗೊಳಿಸಿರುವ ಗ್ರಾಮಾಡಳಿತ ಮಳೆಗಾಲದಲ್ಲಿ ನೀರು ಶುದ್ಧೀಕರಿಸಿ ಬಳಕೆ ಮಾಡಿಕೊಳ್ಳುವ ಮೂಲಕ ಯೋಜನೆ ಉದ್ದೇಶ ಸಾಕಾರಗೊಳಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ತುಕ್ಕು ಹಿಡಿದಿರುವ ಮಳೆ ಕೊಯ್ಲುಘಟಕದ ಸಂಪ್‌ನ ಮುಚ್ಚಳ ಬದಲಿಸಿ ಸೂಕ್ತ ರಕ್ಷಣೆ ಕಲ್ಪಿಸಲಿ ಎಂಬುದು ಸಾರ್ವಜನಿಕರ ಆಗ್ರಹಿವಾಗಿದೆ.