

ಕನಕಗಿರಿ: ಇಲ್ಲಿನ ಎಪಿಎಂಸಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಇರುಮುಡಿ ಕಾರ್ಯಕ್ರಮ ಜರುಗಿತು.
ಸ್ವಾಮಿ ದೇವಸ್ಥಾನವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಅಯ್ಯಪ್ಪಸ್ವಾಮಿ, ಗಣೇಶ, ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನೆರವೇರಿತು.
ತರ ಗುರುಸ್ವಾಮಿಗಳಾದ ಅನಿಲಕುಮಾರ ಬಿಜ್ಜಳ, ದಾಸಸ್ವಾಮಿ, ರಾಘವೇಂದ್ರ ಮರಾಠಿ, ಲಕ್ಷ್ಮಣ ದಾಯಿಪುಲ್ಲೆ, ಹನುಮಂತಪ್ಪ ಸೇರಿ ಒಟ್ಟು 192 ಮಾಲಾಧಾರಿಗಳಿಗೆ ಇರುಮುಡಿ ಕಟ್ಟಲಾಯಿತು. ಮಾಲಾಧಾರಿಗಳ ಕುಟುಂಬಸ್ಥರು, ನೆರೆ ಹೊರೆಯವರು ಇರುಮುಡಿಯ ತುಪ್ಪದ ಕಾಯಿಗೆ ತುಪ್ಪ, ಅಕ್ಕಿ ಹಾಕಿ ಭಕ್ತಿ ಸಮರ್ಪಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಕನಕಾಚಲ ದೇವಸ್ಥಾನ ಮಾರ್ಗವಾಗಿ ಅಯ್ಯಪ್ಪಸ್ವಾಮಿ ಭಾವಚಿತ್ರ ಮೆರವಣಿಗೆಯೊಂದಿಗೆ ಮಾಲಾಧಾರಿಗಳು ಶಬರಿಮಲೆಗೆ ತೆರಳಿದರು. ಪ್ರಮುಖರಾದ ಅನಿಲ್ ರಾಠೋಡ್, ಬಸವರಾಜ ಸಜ್ಜನ್, ಪ್ರವೀಣ ಸಜ್ಜನ್ ಇತರರಿದ್ದರು.