

ಕನಕಗಿರಿ: ಸಂಘ-ಸಂಸ್ಥೆಗಳು, ಯೂಟ್ಯೂಬರ್‌ಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಸಿಐಟಿಯು, ಅಂಗನವಾಡಿ ನೌಕರರ ಸಂಘದಿಂದ ಶುಕ್ರವಾರ ಪಟ್ಟಣದ ಸಿಡಿಪಿಒ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ಕನಕಗಿರಿ ತಾಲೂಕಿನ 371ಅಂಗನವಾಡಿ ಕೇಂದ್ರಗಳಲ್ಲಿ 740 ಮಹಿಳೆಯರು ಕಾರ್ಯಕರ್ತರು ಮತ್ತು ಸಹಾಯಕಿಯರಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಇತ್ತೀಚಿಗೆ ಕೆಲ ಕನ್ನಡ ಸಂಘದವರು ಹಾಗೂ ಯೂಟ್ಯೂಬರ್‌ಗಳು ಪತ್ರಕರ್ತರೆಂದು ಹೇಳಿಕೊಂಡು ಕೆಲಸದ ವೇಳೆ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ರೆಕಾರ್ಡ್ ಮಾಡುವುದು, ಕೇಂದ್ರಕ್ಕೆ ಸಂಬಂಧ ಪಡದ ವ್ಯಕ್ತಿಗಳ ಬಳಿ ಹೇಳಿಕೆ ಪಡೆದು ಕಾರ್ಯಕರ್ತೆಯರನ್ನು ಹೆದರಿಸಿ ಹಣದ ಬೇಡಿಕೆಯಿಡುತ್ತಿದ್ದಾರೆ ಎಂದು ದೂರಿದರು.
ಅಂಗನವಾಡಿಗಳಿಗೆ ಬರುವ ಆಹಾರ ಮತ್ತು ಕೇಂದ್ರಗಳ ಸೌಲಭ್ಯ ಪರಿಶೀಲನೆ, ಮೇಲ್ವಿಚಾರಣೆಗಾಗಿ ಸಿಡಿಪಿಒ, ಸೂಪರ್‌ವೈಸರ್, ತಾಲೂಕು ಮತ್ತು ಜಿಲ್ಲಾಡಳಿತವಿದೆ. ಆದರೆ ಯಾವುದೇ ಸಂಬಂಧವಿರದವರು ಕೇಂದ್ರಗಳಿಗೆ ಭೇಟಿ ನೀಡಿ ಸಿಬ್ಬಂದಿಗೆ ತೊಂದರೆ ಕೊಡುವುದು ಸರಿಯಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ಖಾಸಿಂಸಾಬ ಸರ್ದಾರ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಮರಮ್ಮ ಕನಕಗಿರಿ, ಜಂಟಿ ಕಾರ್ಯದರ್ಶಿ ಅನುಸೂಯಾ, ಕಾರ್ಯದರ್ಶಿ ಲಕ್ಷ್ಮೀ ಸಜ್ಜನ್, ಪ್ರಮುಖರಾದ ಶಿವಕುಮಾರ್ ಸುಳೇಕಲ್, ಮಲ್ಲಪ್ಪ ಮ್ಯಾಗಡೆ, ಪರಶುರಾಮ, ವೆಂಕಟೇಶ್, ಸಣ್ಣ ನಿಂಗಪ್ಪ, ನಬಿಸಾಬ ಚಳ್ಳಮರದ ಇತರರಿದ್ದರು.