141 ಅಂಗನವಾಡಿ ಕೇಂದ್ರಗಳಿಗಿಲ್ಲ ಸ್ವಂತ ಕಟ್ಟಡ > ಕನಕಗಿರಿಯಲ್ಲಿ ಮಂಜೂರಾದ ಕಾಮಗಾರಿಗೆ ಇಲ್ಲ ಜಾಗ > ಸಚಿವ ಶಿವರಾಜ ತಂಗಡಗಿ ಕ್ಷೇತ್ರದಲ್ಲೇ ಸಮಸ್ಯೆ

knk4
ಕನಕಗಿರಿಯ 6ನೇ ವಾರ್ಡ್‌ನ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ.
Published on

ಕನಕಗಿರಿ: ಶಾಲಾ ಪೂರ್ವ ಶಿಕ್ಷಣದ ಜತೆಗೆ ಅಗತ್ಯ ಸೇವೆ ಒದಗಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಅಂಗನವಾಡಿ ಕೆಂದ್ರಗಳು ನಡೆಯುತ್ತಿವೆ. ಆದರೆ, ಕನಕಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೇವಾ ವ್ಯಾಪ್ತಿಯಲ್ಲಿ 141 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಹಾಗೂ ಇಲಾಖೆಯೇತರ ಕಟ್ಟಡಗಳಲ್ಲಿ ನಡೆಯುತ್ತಿವೆ.

ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ, ಪೂರಕ ಪೌಷ್ಟಿಕ ಆಹಾರ, ಚುಚ್ಚುಮದ್ದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ಪೌಷ್ಟಿಕ ಆಹಾರ ಶಿಕ್ಷಣ ಸೇವೆಗಳನ್ನು ಒದಗಿಸಲಾಗುತ್ತಿದೆ. ಕನಕಗಿರಿ, ಕಾರಟಗಿ ಹಾಗೂ ಗಂಗಾವತಿ ತಾಲೂಕಿನ ಹಲವು ಗ್ರಾಮಗಳಲ್ಲಿ ಒಟ್ಟು 371 ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಆದರೆ, ಇದರಲ್ಲಿ 141 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲದಂತಾಗಿದೆ.

ಗ್ರಾಮೀಣ ಭಾಗದ 203, ನಗರ ಪ್ರದೇಶದ 27 ಸೇರಿ ಒಟ್ಟು 230 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳನ್ನು ಹೊಂದಿದ್ದರೆ, ಕಾರಟಗಿ ಹಾಗೂ ಕನಕಗಿರಿ ಪಟ್ಟಣಗಳಲ್ಲಿ 45, ಗ್ರಾಮೀಣ ಭಾಗದ 52 ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಡಗಳೇ ಗತಿಯಾಗಿವೆ.

ನಗರ ವ್ಯಾಪ್ತಿಯ ನಾಲ್ಕು ಹಾಗೂ ಗ್ರಾಮೀಣ ಭಾಗದ 40 ಕೇಂದ್ರಗಳು ಗ್ರಾಪಂ, ಸಮುದಾಯ ಭವನ, ಶಾಲಾ ಕಟ್ಟಡಗಳಲ್ಲಿ ಸಾಗಿವೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಾರ್ಷಿಕ ಸಾವಿರಾರು ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದು ಹೇಳಿಕೊಳ್ಳುವ ಸರ್ಕಾರವು, ಅಂಗನವಾಡಿಗಳಿಗೆ ಈವರೆಗೂ ಸ್ವಂತ ಕಟ್ಟಡ ನಿರ್ಮಿಸದಿರುವುದು ವಿಪರ್ಯಾಸದ ಸಂಗತಿ. ಸಾಲದೆಂಬಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಇದೇ ಕ್ಷೇತ್ರದವರಾಗಿದ್ದು, ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.

ನಗರಗಳಲ್ಲಿ ನಿವೇಶನದ ಸಮಸ್ಯೆ: ಕನಕಗಿರಿ ಸಿಡಿಪಿಒ ವ್ಯಾಪ್ತಿಗೆ ಒಳಪಡುವ ಕನಕಗಿರಿ ಹಾಗೂ ಕಾರಟಗಿ ಪಟ್ಟಣಗಳಲ್ಲಿ 42 ಕಡೆಗಳಲ್ಲಿ ಜಾಗದ ಅವಶ್ಯವಿದ್ದು, 10 ಕಡೆಗಳಲ್ಲಿ ಜಾಗ ದೊರೆತಿದೆ. 32 ಕೇಂದ್ರಗಳಿಗೆ ನಿವೇಶನ ಕೊರತೆಯಿದೆ. ಗ್ರಾಮೀಣ ಭಾಗದಲ್ಲಿ ಆರು ಕಡೆಗಳಲ್ಲಿ ಈ ಸಮಸ್ಯೆ ಕಾಡುತ್ತಿದೆ.

31 ಕಟ್ಟಡಗಳಿಗೆ ಮಂಜೂರು

ಬಾಡಿಗೆ ಹಾಗೂ ಇತರೆ ಕಟ್ಟಡಗಳಲ್ಲಿ ನಡೆಯುತ್ತಿರುವ 141 ಅಂಗನವಾಡಿಗಳ ಪೈಕಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಮೈಕ್ರೋ ಹಾಗೂ ಎಸ್ಸಿಪಿ ಅನುದಾನದಲ್ಲಿ 31 ಅಂಗನವಾಡಿಗಳನ್ನು ನಿರ್ಮಿಸಲು ಅನುದಾನ ಮಂಜೂರಾಗಿದ್ದು, 15 ಕಾಮಗಾರಿಗಳು ಪ್ರಗತಿಯಲ್ಲಿದ್ದು, 16 ಕಡೆಗಳಲ್ಲಿ ಸ್ಥಳ ಬದಲಾವಣೆ, ತಾಂತ್ರಿಕ ತೊಂದರೆಯಿಂದಾಗಿ ಸ್ಥಗಿತಗೊಂಡಿವೆ. ಈ 31 ಕಾಮಗಾರಿಗಳು ಮುಗಿದರೂ ಇನ್ನೂ 110 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಕೋಟ್: ಈಗಾಗಲೇ 60 ಅಂಗನವಾಡಿ ಕಟ್ಟಡಗಳಿಗೆ ಸ್ಥಳಗಳನ್ನು ಗುರುತಿಸಲಾಗಿದೆ. ನಗರ ಪ್ರದೇಶದ ಅವಶ್ಯ ಏರಿಯಾಗಳಲ್ಲಿ ಜಾಗ ದೊರೆಯದಿರುವುದು ಸಮಸ್ಯೆಯಾಗಿದೆ. 2 ವರ್ಷಗಳ ಹಿಂದೆ 50 ಅಂಗನವಾಡಿಗಳು ಮಂಜೂರಾಗಿದ್ದು, ತಾತ್ಕಾಲಿಕ ಕಟ್ಟಡಗಳಲ್ಲಿ ಆರಂಭಿಸಲಾಗಿತ್ತು. ಕಕ, ಎಸ್ಸಿಪಿ, ಟಿಎಸ್‌ಪಿ ಯೋಜನೆಯಡಿ ಕಟ್ಟಡ ನಿರ್ಮಾಣಕ್ಕೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

> ವಿರೂಪಾಕ್ಷಿ, ಸಿಡಿಪಿಒ, ಕನಕಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net