ಕೃಷಿ ಸುಧಾರಣೆ ನೆಪದಲ್ಲಿ ಕಾರ್ಪೋರೇಟ್ ಕಂಪನಿಗಳ ಪರ ನಿಲುವು ಸಿಐಟಿಯುದಿಂದ ತಹಸೀಲ್ದಾರ್‌ಗೆ ಮನವಿ

09082021 Kanakagiri citu protest
Published on

ಕನಕಗಿರಿ: ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ. ಅಲ್ಲದೇ, ಕಾರ್ಪೋರೇಟ್ ಕಂಪನಿಗಳ ಪರವಾದ ನಿಲುವಾಗಿವೆಯೆಂದು ಸಿಐಟಿಯು ತಾಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ ಆರೋಪಿಸಿದರು.

ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಸೋಮವಾರ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ಪಟ್ಟಣದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದರು. ನೂತನ ಕಾಯ್ದೆಯಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ಇದರಿಂದ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಕೃಷಿ ಕ್ಷೇತ್ರದೊಳಗೆ ಕಾರ್ಪೋರೇಟ್ ಕಂಪನಿಗಳ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕಂಪನಿಗಳು ಸೂಕ್ತ ಬೆಲೆ ನೀಡಲು ನಿರಾಕರಿಸಿದರೆ ರೈತರಿಗೆ ಯಾವುದೆ ರಕ್ಷಣೆ ಸಿಗುವುದಿಲ್ಲ. ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಲಾಭದಾಯಕ ಬೆಲೆಯೂ ಸಿಗುವುದಿಲ್ಲ. ಕಾಯ್ದೆ ತಿದ್ದುಪಡಿಯಿಂದ ನಿಧಾನವಾಗಿ ಎಲ್ಲ ಎಪಿಎಂಸಿಗಳು ಮುಚ್ಚಲ್ಪಡುತ್ತವೆ ಎಂದು ಆಪಾದಿಸಿದರು.

ಸಿಐಟಿಯು ತಾಲೂಕು ಕಾರ್ಯದರ್ಶಿ ನಬೀಸಾಬ್ ಚಳ್ಳಮರದ್, ಉಪಾಧ್ಯಕ್ಷ ಹುಸೇನಪ್ಪ ತಾವರಗೇರಾ, ಕೂಲಿ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಹುಸೇನಪ್ಪ, ಸಿಪಿಐ(ಎಂ) ಶಾಖಾ ಕಾರ್ಯದರ್ಶಿ ಪರಶುರಾಮ, ಪದಾಧಿಕಾರಿಗಳಾದ ಹೊನ್ನಪ್ಪ, ಮುನಿಯಪ್ಪ ಹುಸೇನಪ್ಪ, ರಾಜಾ, ವೆಂಕಟೇಶ, ಹೊನ್ನೂರಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net