

ಕನಕಗಿರಿ: ದುಶ್ಚಟಗಳ ಬಗ್ಗೆ ಅರಿವು ಮೂಡಿಸಿ, ಜನರ ಮನಸ್ಸನ್ನು ಪರಿವರ್ತಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿ ಗಳು ಎಂದು ತಾಪಂ ಇಒ ಕೆ.ರಾಜಶೇಖರ್ ಹೇಳಿದರು.
ತಾಪಂ ಕಚೇರಿಯಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ನಿಮಿತ್ತ ಶುಕ್ರವಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು. ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅಲ್ಲದೇ, ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು.
ಬಟ್ಟೆಯ ಚೀಲದ ಜೋಳಿಗೆ ಹಿಡಿದು, ಪ್ರತಿ ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳ ಬಗ್ಗೆ ಜನತೆಗೆ ತಿಳಿವಳಿಕೆ ನೀಡಿ ಮನಪರಿರ್ವತನೆ ಮಾಡಿದರು. ಅವರ ಕಾಳಜಿ ಮತ್ತು ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ನೆಮ್ಮದಿ ಕಂಡುಕೊಳ್ಳಬೇಕು ಎಂದರು.
ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳನ್ನು ತ್ಯೆಜಿಸುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಾಲೂಕು ಯೋಜನಾಧಿಕಾರಿ ಡಾ.ಹುಲಗಪ್ಪ, ವಿಷಯ ನಿರ್ವಾಹಕರಾದ ಕೊಟ್ರಯ್ಯಸ್ವಾಮಿ, ಕೆ.ಪವನಕುಮಾರ್, ಯಂಕೋಬ, ಹನುಮವ್ವ, ಮುದೇಗೌಡ, ಹನುಮಂತ, ಸಂಗಾರೆಡ್ಡಿ, ಸೈಯದ್ ತನ್ವೀರ್, ಮೇಘರಾಜ, ಶಿವಕುಮಾರ್ ಕೆ, ಮೌನೇಶ್, ರೇಣುಕಾ, ಶರಣಪ್ಪ, ಮುದಿಯಪ್ಪ, ಹುಲುಗಪ್ಪ ಇತರರಿದ್ದರು.