ಐಟಿ ವಿಷಯಕ್ಕೆ ಶಿಕ್ಷಕರಿಲ್ಲ ಪುಸ್ತಕವೂ ಅಲಭ್ಯ, 42 ವಿದ್ಯಾರ್ಥಿಗಳು ಅತಂತ್ರ ಪಾಲಕರಿಗೆ ಫಲಿತಾಂಶದ್ದೇ ಚಿಂತೆ

no teacher for IT subject
ಕನಕಗಿರಿಯ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಹೊರನೋಟ.
Published on

ಕನಕಗಿರಿ: ನಗರದ ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎನ್‌ಎಸ್‌ಕ್ಯೂಎಫ್(ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು) ಅಡಿ ಕಳೆದ ವರ್ಷದಿಂದ ಆರಂಭಗೊಂಡ ಇನ್‌ಫಾರ್ಮೆಷನ್ ಟೆಕ್ನಾಲಜಿ ಕೊರ್ಸ್ ಆಯ್ಕೆ ಮಾಡಿಕೊಂಡ 42 ವಿದ್ಯಾರ್ಥಿಗಳು ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಕೌಶಲಾಧಾರಿತ ಸಾಮರ್ಥ್ಯ ಚಟುವಟಿಕೆಯಾದ ವಿವಿಧ ವಿಷಯಗಳು ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಿದ್ದು, ಕೆಲ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ ಕೋರ್ಸ್ ಅಳವಡಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಆದೇಶಿಸಿತ್ತು. ಆದ್ದರಿಂದ ಆದರ್ಶ ಶಾಲೆಯ 9ನೇ ತರಗತಿಯ 42 ವಿದ್ಯಾರ್ಥಿಗಳು ಹಿಂದಿ ಬದಲಾಗಿ ಈ ವಿಷಯ ಆಯ್ಕೆ ಮಾಡಿಕೊಂಡಿದ್ದರು.

ಇದಕ್ಕೆ ಅವರ ಪಾಲಕರು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಆದರೆ, ಈ ವಿದ್ಯಾರ್ಥಿಗಳಿಗೆ ಕೋರ್ಸ್‌ಗೆ ಸಂಬಂಧಿಸಿದ ಪುಸ್ತಕ ವಿತರಿಸಿಲ್ಲ ಜತೆಗೆ ವಿಷಯಕ್ಕೆ ಶಿಕ್ಷಕರು ನೇಮಕವಾಗಿಲ್ಲ. ತಿಂಗಳಿಗೊಮ್ಮೆ ಮಾಹಿತಿ ತಿಳಿದವರು ಬೇಸಿಕ್ ಪಾಠ ಮಾಡಿದ್ದಾರೆ. ಆದರಲ್ಲಿಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

ಈಗಾಗಲೇ ಶಾಲೆ ಆರಂಭವಾಗಿ ತಿಂಗಳಾದರೂ ವಿದ್ಯಾರ್ಥಿಗಳಿಗೆ ಐಟಿ ವಿಷಯದ ಪುಸ್ತಕ, ಬೋಧಿಸಲು ಶಿಕ್ಷಕರು ಇಲ್ಲ. ಇದರಿಂದ ಅತಂತ್ರಗೊಂಡ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹಿಂದಿ ವಿಷಯದ ತರಗತಿಗೆ ಹಾಜರಾಗುತ್ತಿದ್ದಾರೆ. ಬೋಧನೆಗೆ ಬಿಇ ಅಥವಾ ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) ಪದವೀಧರರು ಬೇಕಿದ್ದು, ಈ ವಿಷಯದಲ್ಲಿ ಪದವಿ ಪಡೆದವರು ಈ ಭಾಗದಲ್ಲಿ ದೊರೆತಿಲ್ಲ.

ಇದೀಗ ಶಿಕ್ಷಕರ ನೇಮಕಾತಿಗೆ ಮೇಲಧಿಕಾರಿಗಳು ಮೌಖಿಕವಾಗಿ ಸೂಚಿಸಿದ್ದಾರೆ. ಈ ಕುರಿತು ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಶಿಕ್ಷಕರಿಗೆ ನೀಡುವ ವೇತನದ ಗೊಂದಲವೇ ಇದಕ್ಕೆಲ್ಲ ಕಾರಣ. ಶಿಕ್ಷಕರಿಗೆ ಇದುವರೆಗೂ ವೇತನ ಮಂಜೂರಾಗಿಲ್ಲ ಎನ್ನಲಾಗಿದೆ.

ರಿಸಲ್ಟ್ ಮೇಲೆ ಪರಿಣಾಮ: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ ಕುರಿತು ಇಲಾಖೆ ಮಾತನಾಡುತ್ತಿದೆ. ಆದರೆ, ಶಿಕ್ಷಕರು ಹಾಗೂ ಪುಸ್ತಕಗಳನ್ನು ಒದಗಿಸಲು ಮುಂದಾಗದಿರುವುದು ಈ ಬಾರಿ ಅತಂತ್ರ ಸ್ಥಿತಿಯಲ್ಲಿರುವ ಮಕ್ಕಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಎನ್‌ಎಸ್‌ಕ್ಯೂಎಫ್ ಅಡಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ. ಪುಸ್ತಕಗಳು ಬಂದಿದ್ದು, ಶಾಲೆಗಳಿಗೆ ಸರಬರಾಜು ಮಾಡಲಾಗುವುದು.

ಶ್ರೀಶೈಲ ಬಿರಾದಾರ, ಡಿಡಿಪಿಐ, ಕೊಪ್ಪಳ

ನನ್ನ ಮಗ ಈ ವರ್ಷ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಯಾವ ವಿಷಯಕ್ಕೂ ಶಿಕ್ಷಕರು, ಪುಸ್ತಕಗಳು ಇಲ್ಲ. ಇದರಿಂದ ಫಲಿತಾಂಶ ಕಡಿಯಾದರೆ ಯಾರು ಹೊಣೆ? ಎನ್ನುವ ಪ್ರಶ್ನೆ ಕಾಡುತ್ತಿದೆ.

ಶಶಿಧರ ಬೊಂದಾಡೆ, ಪಾಲಕ

ಐಟಿ ವಿಷಯ ತೆಗೆದುಕೊಳ್ಳುವಂತೆ ಮುಖ್ಯಶಿಕ್ಷಕರು ಪ್ರೇರೇಪಿಸಿದ್ದರಿಂದ 43 ವಿದ್ಯಾರ್ಥಿಗಳು ದಾಖಲಾಯಿ ಪಡೆದಿದ್ದಾರೆ. ಕಳೆದ ವರ್ಷದಿಂದಲೂ ಶಿಕ್ಷಕರಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯದ ಚಿಂತೆಯಾಗಿದೆ.

ವೆಂಕಟೇಶ ಸೌದ್ರಿ, ಪಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net