

ಕನಕಗಿರಿ: ಭಾರತದ ಪ್ರಗತಿಗೆ ಅಡ್ಡಿಯಾಗಿರುವ ಭ್ರಷ್ಟಾಚಾರ, ಹಿಂಸೆ, ನಿರುದ್ಯೋಗ, ಬಡತನ, ಅನಕ್ಷರತೆ, ಭಯೋತ್ಪಾದನೆಯಂಥ ಸಾಮಾಜಿಕ ಪಿಡುಗುಗಳನ್ನು ತೊಲಗಿಸುವವರೆಗೂ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗುವುದಿಲ್ಲ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ನಗರದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಪಪಂ, ತಾಲೂಕು ಆಡಳಿತ, ತಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಅವಿಶ್ರಾಂತ ಹೋರಾಟ ಮತ್ತು ತ್ಯಾಗದ ಸಂಕೇತವಾಗಿದೆ. ಅಹಿಂಸೆಯ ಹಾದಿ ಹಿಡಿದು ಮಹಾತ್ಮ ಗಾಂಧಿ ಭಾರತೀಯರಿಗೆ ಸ್ಪೂರ್ತಿಯಾಗಿದ್ದಾರೆ. ಇಂದು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಬೇಕು. ಭಾರತ ಕಳೆದ 78 ವರ್ಷಗಳಲ್ಲಿ ಬಾಹ್ಯಾಕಾಶ ಸಂಶೋಧನೆ, ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಕ್ರೀಡೆಗಳಲ್ಲಿ ಬಹಳಷ್ಟು ಸಾಧನೆ ಮಾಡಿದೆ. ದೇಶದ ಭವಿಷ್ಯ ರೂಪಿಸುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ. ಪರಿಸರ ಸಂರಕ್ಷಣೆ, ಜವಾಬ್ದಾರಿಯುತ ಪೌರತ್ವಕ್ಕೆ ಪ್ರೋತ್ಸಾಹಿಸಬೇಕು ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ವಿ.ಎಚ್.ಹೊರಪೇಟಿ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ತಾಲೂಕು ಯೋಜನಾಧಿಕಾರಿ ದುರ್ಗಾಸಿಂಗ್, ಪಿಐ ಎಂ.ಡಿ.ಫೈಜುಲ್ಲಾ, ಸಿಆರ್‌ಪಿ ರಾಜೀವ್, ಪಪಂ ಅಧ್ಯಕ್ಷೆ ಹುಸೇನ್‌ಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ಅನಿಲ್‌ಕುಮಾರ ಬಿಜ್ಜಳ್, ರಾಜಾಸಾಬ್ ನಂದಾಪುರ, ಸುರೇಶ ಗುಗ್ಗಳಶೆಟ್ರ, ಶೇಷಪ್ಪ, ಶರಣೇಗೌಡ, ರಾಕೇಶ, ಹನುಮಂತ ಬಸರಿಗಿಡ, ನಂದಿನಿ ರಾಮಾಂಜನೇಯರೆಡ್ಡಿ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಇತರರಿದ್ದರು.
ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಪಂನಲ್ಲಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಪೊಲೀಸ್ ಠಾಣೆಯಲ್ಲಿ ಪಿಐ ಎಂ.ಡಿ.ಫೈಜುಲ್ಲಾ, ಸಿಡಿಪಿಒ ಕಚೇರಿಯಲ್ಲಿ ಸಿಡಿಪಿಒ ವಿರೂಪಾಕ್ಷಿ, ತಾಪಂನಲ್ಲಿ ಇಒ ರಾಜಶೇಖರ ಧ್ವಜಾರೋಹಣ ನೆರವೇರಿಸಿದರು.
ಶಿಷ್ಟಾಚಾರ ಉಲ್ಲಂಘನೆ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡಲಾಗುವುದು ಎಂದು ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಹೇಳಿದ್ದರು. ಆದರೆ, ಪಪಂ ಸದಸ್ಯರ ಪತಿ ಹಾಗೂ ಪುತ್ರರು ವೇದಿಕೆ ಹಂಚಿಕೊಂಡು ಶಿಷ್ಟಾಚಾರ ಉಲ್ಲಂಘಿಸಿದ್ದು, ಸಾರ್ವಜನಿಕರ ಬೇಸರಕ್ಕೆ ಕಾರಣವಾಯಿತು.