

ಕನಕಗಿರಿ: ಸ್ಥಳೀಯರು ಸೇರಿ ಗ್ರಾಮೀಣ ಜನತೆ ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಲು ಪಟ್ಟಣದಲ್ಲಿಯೇ ಆರೋಗ್ಯ ಸೌಲಭ್ಯ ಒದಗಿಸಲು ನಿರ್ಮಿಸಲು ಉದ್ದೇಶಿಸಿದ್ದ 100 ಹಾಸಿಗೆ ಸುಸಜ್ಜಿತ ಆಸ್ಪತ್ರೆಗೆ ಕಲ್ಯಾಣ ಕರ್ನಾಟಕ ಸಂಪೂರ್ಣ ಅಭಿವೃದ್ಧಿ ಯೋಜನೆ(ಕೆಕೆಆರ್ಡಿಬಿ)ಯಡಿ 42 ಕೋಟಿ ರೂ. ಮಂಜೂರಾಗಿದೆ.
ಪ್ರಸ್ತುತ ಕನಕಗಿರಿಯಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಸದಾ ವೈದ್ಯರ ಕೊರತೆ ಎದುರಿಸುತ್ತಿದೆ. ಅಲ್ಲದೇ, ಎಲ್ಲ ಬಗೆಯ ಚಿಕಿತ್ಸೆಗೂ ಇಲ್ಲಿ ಅವಕಾಶವಿಲ್ಲವಾಗಿದ್ದರಿಂದ ಗಂಗಾವತಿ, ಕೊಪ್ಪಳ, ಹುಬ್ಬಳ್ಳಿ, ಬೆಂಗಳೂರು ಕಡೆಗೆ ಮುಖ ಮಾಡಬೇಕಿತ್ತು. ಹಿಂದುಳಿದ ಭಾಗವಾದ ಇಲ್ಲಿನ ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗಿತ್ತು. ಈ ನಿಟ್ಟಿನಲ್ಲಿ ಪಟ್ಟಣವು ತಾಲೂಕು ಕೇಂದ್ರವಾದ ಬಳಿಕ 100 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಬೇಕೆನ್ನುವ ಆಗ್ರಹ ವ್ಯಕ್ತವಾಗಿತ್ತು.
ಮಾಜಿ ಶಾಸಕ ಬಸವರಾಜ ದಢೇಸುಗೂರು ಅಧಿಕಾರಾವಧಿಯಲ್ಲಿಯೇ ಆಸ್ಪತ್ರೆ ಮಂಜೂರಿಗೆ ಪತ್ರ ವ್ಯವಹಾರ ನಡೆದಿದ್ದರೂ ಪತ್ರಗಳೇ ಹಲವು ಗೊಂದಲಗಳಿಗೆ ಕಾರಣವಾಗಿದ್ದವು. ಜನರ ಆಸೆ ಕೈಗೂಡಿರಲಿಲ್ಲ. ಇದಾದ ಬಳಿಕ ಸಚಿವ ಶಿವರಾಜ ತಂಗಡಗಿ ಪಟ್ಟಣದಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಿಸುವ ಭರವಸೆ ನೀಡಿದ್ದರು. ಆಸ್ಪತ್ರೆಗೆ ಬೇಕಾದ ಜಾಗವನ್ನು ಇಲ್ಲಿನ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠಕ್ಕೆ ಸೇರಿದ ಸರ್ವೇ ನಂ.288/*/4 ರಲ್ಲಿನ 5 ಎಕರೆ ಜಮೀನನ್ನು ಪೀಠಾಧಿಪತಿಗಳಿಂದ ಸರ್ಕಾರಕ್ಕೆ ದಾನವಾಗಿ ಪಡೆದಿದ್ದರು.
ಕನಕಗಿರಿ ಪಟ್ಟಣ ಸೇರಿ ಇತರೆ 7 ಕಡೆಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕೆಕೆಆರ್ಡಿಬಿಯಿಂದ ಅನುದಾನ ಮಂಜೂರಾಗಿದೆ. ಅದರಲ್ಲಿ ಕನಕಗಿರಿ ಆಸ್ಪತ್ರೆಗೆ 43 ಕೋಟಿ ರೂ. ಮಂಜೂರು ಮಾಡಿ ಅ.16ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ) ಪವಿತ್ರಾ ಮೂಲಕ ಮಂಜೂರು ಮಾಡಿ ಆದೇಶ ಹೊರಡಿಸಲು ಸಚಿವ ತಂಗಡಗಿ ಯಶಸ್ವಿಯಾಗಿದ್ದಾರೆ. ಟೆಂಡರ್ ಪ್ರಕ್ರಿಯೆ ಬಳಿಕ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಯೋಚನೆಯಲ್ಲಿ ಸಚಿವರಿದ್ದಾರೆ.
ಸಚಿವರ ಆಸೆ ಕೈಗೂಡಲಿಲ್ಲವೇ?: ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಸೇವೆ ಸುಧಾರಿಸಲು ಹಾಗೂ ಜನರಿಗೆ ಪರಿಣಾಮಕಾರಿ ಮತ್ತು ಗುಣಮಟ್ಟದ ಸೇವೆ ಒದಗಿಸಲು ಆಸ್ಪತ್ರೆಗಳನ್ನು ಹೆಚ್ಚಿಸುವ ಹಾಗೂ ಮೇಲ್ದರ್ಜೇಗೇರಿಸಲು ಒಟ್ಟು 88 ಸಂಸ್ಥೆಗಳನ್ನು ಇಲಾಖೆ ಇಂಜಿನಿಯರ್ ಗುರುತಿಸಿ ಇಲಾಖೆಗೆ ಈ ಹಿಂದೆಯೇ ವರದಿ ಸಲ್ಲಿಸಿದ್ದರು. ಅದರಲ್ಲಿ ಪಟ್ಟಣವೂ ಸೇರಿತ್ತು. ಅದರಂತೆ ಸಚಿವ ಶಿವರಾಜ ತಂಗಡಗಿ, ಅ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಬರುವುದರೊಳಗೆ ಅನುದಾನ ಬಿಡುಗಡೆ ಮಾಡಿಸಿ ಸಿಎಂ ಬಂದಾಗ ಅವರಿಂದಲೇ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಬೇಕೆಂಬ ಬಯಕೆ ಹೊಂದಿದ್ದರು. ಆದರೆ, ಅ.6ರ ಒಳಗಾಗಿ ಅನುದಾನ ಮಂಜೂರಾಗದಿರುವುದು ಸಚಿವರ ಆಸೆ ಕೈಗೂಡಲಿಲ್ಲ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿವೆ.
100 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ 42 ಕೋಟಿ ರೂ. ಮಂಜೂರಾಗಿದೆ. ಆಸ್ಪತ್ರೆ ನಿರ್ಮಾಣವಾದರೆ ಜನರಿಗೆ ಅನುಕೂಲವಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಸಿಎಂ ಸಿದ್ದರಾಮಯ್ಯನವರು ಅ.6ಕ್ಕೆ ಕೊಪ್ಪಳಕ್ಕೆ ಬರುವ ಮುಂಚೆ ಅನುದಾನ ಬಿಡುಗಡೆಯಾಗಿದ್ದರೆ ಅವರಿಂದಲೇ ಶಂಕುಸ್ಥಾಪನೆ ನೆರವೇರಿಸಲಾಗುತಿತ್ತು. ಆದರೆ, ಮಂಜೂರಾತಿ ಆದೇಶ ತಡವಾಗಿದ್ದರಿಂದ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲಾಗುವುದು.
ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ