ಕನಕದಾಸರ ಚಿಂತನೆಗಳನ್ನು ಪಸರಿಸುವಂತಾಗಬೇಕು

1mdk2
Published on

ಮಡಿಕೇರಿ: ಕನಕದಾಸರ ಚಿಂತನೆಯು ಸಾರ್ವಕಾಲಿಕವಾದದ್ದು. ಅವರ ಬಗೆಗಿನ ಅಧ್ಯಯನಗಳನ್ನು ಕೈಗೊಂಡು ಅವರ ಚಿಂತನಾಧಾರೆಯನ್ನು ಪಸರಿಸುವಂತಾಗಬೇಕು ಎಂದು ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ.ಅಭಿಪ್ರಾಯಪಟ್ಟರು.


ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಳಚರಿತ್ರೆ, ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ, ಕೀರ್ತನೆ, ಮುಂಡಿಗೆಗಳು ಸಾರ್ವಕಾಲಿಕ ಸಾಹಿತ್ಯಕ ಮೌಲ್ಯದ ಆಕರವಾಗಿದೆ. ಆವುಗಳನ್ನು ಓದಿ ಮೌಲ್ಯಾಧಾರಿತ ಸಮಾಜದ ನಿರ್ಮಿತಿಯಲ್ಲಿ ನಾವು ಕೈ ಜೋಡಿಸಬೇಕಾಗಿದೆ. ಕನಕ ಅಪ್ಪಟ ದೇಶಿಯ ಪ್ರತಿಭೆ. ಆತನ ಚಿಂತನೆಗಳು ನಮ್ಮ ಬದುಕಿಗೆ ಪ್ರೇರಣೆಯಾಗಲಿ ಎಂದರು.


ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಸಂಘದ ಸಂಚಾಲಕ ಬಿಸ್ಟಪ್ಪ ತಲಾವರ್ ಮಾತನಾಡಿ, ಕನಕನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದದ್ದು. ಯೋಧತ್ವದಿಂದ ದಾಸತ್ವದ ಕಡೆಗಿನ ಕನಕನ ರಚನೆಯು ಯುದ್ಧ ವಿರೋಧಿ ನಿಲುವನ್ನು, ಜೀವಪರವಾದ ನುಡಿಗಟ್ಟುಗಳನ್ನು ನಮಗೆ ಒದಗಿಸಿಕೊಡುತ್ತದೆ. ಕನಕನನ್ನು ಇಡೀ ಕರ್ನಾಟಕದ ತಳಸಮುದಾಯಗಳ ಸಾಮಾಜಿಕ ಪ್ರಜ್ಞೆಯಾಗಿ ರೂಪಿಸಿಕೊಳ್ಳುವ ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.


ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಈ ತಿಪ್ಪೇಸ್ವಾಮಿ, ಐಕ್ಯೂಎಸಿ ಸಂಚಾಲಕರು ಮತ್ತು ಗಣಿತ ವಿಭಾಗದ ಮುಖ್ಯಸ್ಥ ಡಾ.ಆರ್.ರಾಜೇಂದ್ರ, ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಟಿ.ಎಸ್.ಮಹಾಲಕ್ಷ್ಮಿ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ತೀರ್ಥ ತಂಗಮ್ಮ, ಮಾನಸ, ಪುಷ್ಯ ಪೂವಮ್ಮ, ಅಲೀನಾ ಜಶ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net