

ವಿಜಯಪುರ: ಮೋಹನ ತರಂಗಿಣಿ, ನಳಚರಿತೆ, ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ ಸೇರಿದಂತೆ 316 ಕೀರ್ತನೆಗಳು ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಸಂತ ಕನಕದಾಸರ ಕೀರ್ತನೆಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಸಂತ ಕನಕದಾಸ ಜಯಂತಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಸಮಾಜದಲ್ಲಿ ಮೌಢ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರ ಎಂದರು.
ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ. ದಾಸ ಸಾಹಿತ್ಯ, ಪದಗಳ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದಿ, ಅನಿಷ್ಠ ಪದ್ಧತಿಗಳು, ಮೂಢನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದವರಾಗಿದ್ದು, ಇಂತಹ ಶ್ರೇಷ್ಠರ ತತ್ವಾದರ್ಶನಗಳನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿ ವ್ಯವಸ್ಥೆ, ಅಸಮಾನತೆ, ಸಮಾಜದಲ್ಲಿನ ಮೌಢ್ಯತೆ, ಅಂಧಕಾರ, ಅನಿಷ್ಠ ಪದ್ಧತಿ, ಮೂಢನಂಬಿಕೆಗಳನ್ನು ತೊಡೆದು ಹಾಕಲು ವಚನಗಳ ಮೂಲಕ ಶ್ರಮಿಸಿದರು. ಅದೇ ಮಾರ್ಗದಲ್ಲಿ ಸಂತ ಕನಕದಾಸರು ಕೂಡ ಸಾಮಾಜಿಕ ಸುಧಾರಣೆಯ ಕೈಂಕರ್ಯದಲ್ಲಿ ಮುನ್ನಡೆದರು.
ಕನಕದಾಸರು ರಚಿಸಿದ ಕೀರ್ತನೆಗಳಲ್ಲೊಂದಾದ ಅತ್ಯಂತ ಮುಖ್ಯವಾದ ಕುಲ ಕುಲವೆಂದು ಹೊಡೆದಾಡದಿರಿ... ಎಂಬ ಕೀರ್ತನೆಯ ಸಾಲುಗಳನ್ನು ಸಚಿವರು ಪ್ರಸ್ತಾಪಿಸುತ್ತಾ, ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕಾಗಿನೆಲೆಯಾದಿ ಕೇಶವ ಇವರ ಕೀರ್ತನೆಗಳ ಅಂಕಿತನಾಮವಾಗಿದೆ. ಕನಕದಾಸರು ವಿವಿಧ ಪ್ರಕಾರದ ಕೀರ್ತನೆಗಳು, ಸುಳಾದಿ, ಉಗಾಭೋಗಗಳ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಲ್ಲದೇ, ಸಂಗೀತ ಪ್ರಪಂಚಕ್ಕೆ ತನ್ನದೇಯಾದ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.
ಬಿಎಲ್ಡಿಇ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ದಾಸ ಸಾಹಿತ್ಯದ 65 ಸಂಪುಟ ಹೊರತರಲಾಗುತ್ತಿದ್ದು, ಈಗಾಗಲೇ 45 ಸಂಪುಟಗಳ ಕಾರ್ಯ ಪೂರ್ಣಗೊಂಡಿದೆ. ಈ ಪೈಕಿ 4 ಸಂಪುಟಗಳು ಕನಕದಾಸರ ಕೀರ್ತನೆಗೊಳಗೊಂಡಿವೆ. ಪ್ರಚಲಿತವಲ್ಲದ, ಎಲ್ಲೂ ಪ್ರಕಟವಾಗದೇ ಇರುವ 150 ಕ್ಕೂ ಹೆಚ್ಚು ಕನಕದಾಸರ ಕೀರ್ತನೆಗಳನ್ನು ಸಂಶೋಧಿಸಿ ಪ್ರಕಟಿಸಲಾಗುತ್ತಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ನೀರಾವರಿ, ಔದ್ಯೋಗಿಕರಣ, ಉದ್ಯೋಗ, ಕೋಟಿ ವೃಕ್ಷ ಅಭಿಯಾನದ ಮೂಲಕ ಹಸರೀಕರಣ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಕನಕದಾಸರ ಜಯಂತಿ ಶುಭ ದಿನದಂದು ಕ್ಷೀರಕ್ರಾಂತಿ ಆರಂಭಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ ಮಾತನಾಡಿ, ಭಕ್ತಿಪಂಥದ ದಾಸವರೇಣ್ಯರಲ್ಲಿ ಭಕ್ತ ಕನಕದಾಸರು ಹೆಸರು ಅಜರಾಮರ. ಅವರಿಂದ ರಚಿತ ಸಾಹಿತ್ಯ ಜನ ಸರಳವಾಗಿ ಅಥೈಸಿಕೊಳ್ಳಬಹುದಾಗಿದೆ. ಅವರ ಚಿಂತನೆಗಳು ಸಂದೇಶಗಳು ಸುಂದರ ಬದುಕಿನ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ದಾರ್ಶನಿಕರು ನೀಡಿರುವ ಸಂದೇಶ ಹಾಗೂ ಚಿಂತನೆಗಳ ಸಾರ ಅರಿತು ನಡೆಯೋಣ ಎಂದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿದರು. ಸಿದ್ದಪ್ಪ ಧನಗೊಂಡ ಉಪನ್ಯಾಸ ನೀಡಿದರು.
ಮೇಯರ್ ಎಂ.ಎಸ್. ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಸುಜಾತಾ ಕಳ್ಳಿಮನಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆಯ ಪಾಲಿಕೆಯ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಮಾಜದ ಮುಖಡರಾದ ಮಲ್ಲಣ್ಣ ಶಿರಸ್ಯಾಡ, ಕೆಕೆಆರ್‌ಟಿಸಿಯ ವಿಭಾಗೀಯ ನಿಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮತ್ತಿತರರಿದ್ದರು.
ಸಿದ್ಧೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೋಹನ್ ಕಟ್ಟಿಮನಿ ನಿರೂಪಿಸಿ ವಂದಿಸಿದರು. ಮಾಳವಿಕಾ ಜೋಶಿ ಹಾಗೂ ತಂಡದವರು ಗೀತ ಗಾಯನ ನಡೆಸಿಕೊಟ್ಟರು.