

ಬ್ಯಾಡಗಿ: ವಿಶ್ವಚೇತನ ಹಾಗೂ ದಾರ್ಶನಿಕ ತತ್ವ ಸಂದೇಶಗಳ ಮೂಲಕ ಪ್ರಸಿದ್ಧಿಯಾದ ಭಕ್ತ ಕನಕದಾಸರ ಜಯಂತ್ಯುತ್ಸವ ನ. 18ರಂದು ಜರುಗಲಿದೆ. ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕಾಗಿನೆಲೆ ಕನಕುಗುರುಪೀಠದ ನಿರಂಜನಾನಂದ ಶ್ರೀಗಳು ಹೇಳಿದರು.
ತಾಲೂಕಿನ ಕಾಗಿನೆಲೆ ಪೀಠದಲ್ಲಿ ಬುಧವಾರ ಆಯೋಜಿಸಿದ್ದ ಕನಕ ಜಯಂತ್ಯುತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿವರ್ಷವೂ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಸಮಾಜ ಬಾಂಧವರು ಶ್ರೀ ಕನಕದಾಸರ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದ ಉಸ್ತುವಾರಿ ವಹಿಸುತ್ತಿದ್ದು, ಸಮಾಜ ಸಂಘಟನೆ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಜಯಂತ್ಯುತ್ಸವ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಿನ ಸಮಾಜ ಬಾಂಧವರ ಸಹಯೋಗದಲ್ಲಿ ನ. 18ರಂದು ಕನಕಗುರುಪೀಠದಲ್ಲಿ ಜರುಗಲಿದೆ. 2025ರ ಕನಕ ಜಯಂತ್ಯುತ್ಸವವನ್ನು ರಾಣೆಬೆನ್ನೂರ ತಾಲೂಕಿನ ಸಮಾಜ ಬಾಂಧವರು ನೆರವೇರಿಸುವರು ಎಂದು ತಿಳಿಸಿದರು.
ರಥೋತ್ಸವಕ್ಕೆ ಚಾಲನೆ: ನ. 18ರಂದು ಜಯಂತ್ಯುತ್ಸವ ಅಂಗವಾಗಿ ಕನಕ ರಥೋತ್ಸವ ಹಾಗೂ ಕನಕಾಧಿಕೇಶವ ದೇವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸಮಾಜ ಬಾಂಧವರು, ಕಲಾವಿದರು, ರಾಜಕೀಯ ನಾಯಕರು ಆಗಮಿಸಲಿದ್ದಾರೆ ಎಂದರು.
ಶಂಕ್ರಪ್ಪ ಮಾತನವರ, ನಾಗರಾಜ ಆನ್ವೇರಿ, ರಾಜೇಂದ್ರ ಹಾವೇರಣ್ಣವರ, ಮಾರುತಿ ಹರಿಹರ, ಎಸ್.ಡಿ. ಕರಿಯಣ್ಣನವರ, ಬೀರಪ್ಪ ಬಣಕಾರ, ನಿಂಗಪ್ಪ ಆಡಿನವರ, ಆರ್.ಎಂ. ಆನ್ವೇರಿ, ಎಂ. ಬೀರಪ್ಪ, ಇತರರಿದ್ದರು.