

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನಕದಾಸರು ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಜಾತಿ, ಭೇದ ದೂರ ಮಾಡಿ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ ಕೀರ್ತನಕಾರ ಕನಕದಾಸರ ಆದರ್ಶ ಯುವ ಪೀಳಿಗೆಗೆ ಮಾದರಿ. ಅವರ ಬದುಕಿನ ಮಜಲುಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯವಾಗಲಿ ಎಂದು ಸಾಹಿತಿ ಮಾರ್ತಾಂಡಪ್ಪ ಕತ್ತಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇಲ್ಲಿನ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅಸಮಾನತೆ ತುಂಬಿದ್ದ ಸಮಾಜದಲ್ಲಿ, ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಜನರನ್ನು ಎಚ್ಚರಿಸಿದ ಕನಕದಾಸರು, ತಮ್ಮ ಜಾಗೃತ ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾದರು. ಭಕ್ತಿ ಮಾರ್ಗದತ್ತ ಜನರನ್ನು ಕೊಂಡೊಯ್ದ ಕನಕದಾಸರ ಮೌಲ್ಯಯುತ ಕೀರ್ತನೆಗಳ ಸಾರವನ್ನು ಎಲ್ಲರೂ ಅರಿಯಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಜಿನದತ್ತ ಹಡಗಲಿ, ಕೆ.ಎಸ್. ಕೌಜಲಗಿ, ಶಾಂತವೀರ ಬೇಟಗೇರಿ, ಡಾ ಶರಣಮ್ಮಗೋರೆಬಾಳ, ಬಸವರಾಜ ಗೊರವರ, ಪ್ರೇಮಾನಂದ ಶಿಂಧೆ, ಮೇಘಾ ಹುಕ್ಕೇರಿ, ಇತರರು ಇದ್ದರು.
ಪ್ರಮೀಳಾ ಜಕ್ಕಣ್ಣವರ ಸ್ವಾಗತಿಸಿದರು. ಮಹಾಂತೇಶ ನರೇಗಲ್ಲ ನಿರೂಪಿಸಿದರು. ಉಮಾ ಬಾಗಲಕೋಟ ವಂದಿಸಿದರು.