

ಮಹಾಲಿಂಗಪುರ: ಧರ್ಮದಲ್ಲಿ ಇರದಿರುವ ಜಾತಿ ಬೇಧದಂತಹ ಸಂಕುಚಿತ ವಿಷಯಗಳನ್ನು ತುರುಕಿರುವುದರಿಂದ ನಮ್ಮ ಸನಾತನ ಹಿಂದು ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಜುಂಜರವಾಡದ ಬಸವರಾಜೇಂದ್ರ ಸ್ವಾಮಿಗಳು ಹೇಳಿದರು.
ಕನಕದಾಸ ಸೇವಾ ಸಮಿತಿ ಮತ್ತು ಕನಕದಾಸ ಪತ್ತಿನ ಸಹಕಾರಿ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕನಕದಾಸರು ಮಾನವ ಸ್ವಾತಂತ್ರೃದ ಕಹಳೆ ಊದಿದ ಮೊದಲಿಗರು ಎಂದರು. ಶಾಸಕ ಸಿದ್ದು ಸವದಿ ಮಾತನಾಡಿ, ದಾಸ ಶ್ರೇಷ್ಠ ಕನಕದಾಸರು. ಯುದ್ಧವಿದ್ಯೆ ಪಾರಂಗತ, ಮಹಾಶೂರ ಮತ್ತು ಆಗರ್ಭ ಶ್ರೀಮಂತರಾಗಿದ್ದರೂ ಭಗವಂತನ ಸಾಕ್ಷಾತ್ಕಾರಕ್ಕಾಗಿ ಸರ್ವ ವ್ಯಾಮೋಹಗಳಿಂದ ಮುಕ್ತರಾಗಿ ದಾಸರಾಗಿ ಮಾನವಕುಲಕೋಟಿಗೆ ಬದುಕಿನ ದಾರಿ ತೋರಿದರು. ಜಾತಿಯ ಪಿಡುಗು ಹೋಗಲಾಡಿಸಲು ಶ್ರಮಿಸಿದ ಮಹಾನ್ ದಾರ್ಶನಿಕರು ಎಂದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಭಕ್ತಿ ಸಂಸ್ಕಾರದ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ, ಪೂಜ್ಯರ ಹಿತನುಡಿಗಳಿಂದ ಜೀವನ ಪಾವನವಾಗುತ್ತೆ. ಅಂತಹ ಶ್ರೇಷ್ಠ ಕಾರ್ಯಕ್ರಮ ಹಮ್ಮಿಕೊಂಡಿರುವ ಹಾಲುಮತ ಸಮಾಜದ ಸಾಮರಸ್ಯದ ಕಾರ್ಯ ಶ್ಲಾಘನೀಯ ಎಂದರು.
ಹಳಂಗಳಿಯ ಮಹಾವೀರ ಪ್ರಭು ಆಶೀರ್ವಚನ ನೀಡಿದರು. ಪಿಎಸ್‌ಐ ಕಿರಣ ಸತ್ತಿಗೇರಿ ಮಾತನಾಡಿದರು. ಶಿರೂರಿನ ಕನಕ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಾಲುಮತ ಸಮಾಜದ ಅಧ್ಯಕ್ಷ ಸತ್ಯಪ್ಪ ಹುದ್ದಾರ, ಮುಖಂಡ ಮಹಾಲಿಂಗಪ್ಪ ಕಳ್ಯಾಗೋಳ ಇದ್ದರು. ಲಕ್ಷ್ಮಣ ಕಿಶೋರ ನಿರೂಪಿಸಿದರು.