

ಮಡಿಕೇರಿ: ಕನಕದಾಸರು ಒಬ್ಬ ಭಕ್ತ ಮಾತ್ರ ಅಲ್ಲ, ಅವರು ಒಬ್ಬ ವಿಚಾರವಾದಿ ಮತ್ತು ಕವಿಯೂ ಅಗಿದ್ದರು ಎಂದು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅಭಿಪ್ರಾಯಪಟ್ಟರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆದ ಮುತ್ತು ಬಂದಿದೆ ಕೇರಿಗೆ ಎಂಬ ರಸ ಗ್ರಹಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹರಿದಾಸ ಪರಂಪರೆಯಲ್ಲಿ ೧೫೦ ಜನ ಹರಿದಾಸರು ಬಂದು ಹೋಗಿದ್ದಾರೆ. ಭಕ್ತಿಯನ್ನು ಸಾಮಾಜಿಕ ಸುಧಾರಣೆಗೆ, ಜ್ಞಾನೋಪಾಸನೆಗೆ ಬಳಸಿಕೊಂಡ ಕೀರ್ತನಾಕಾರರು ಯಾರಾದರೂ ಇದ್ದರೆ ಅದರಲ್ಲಿ ಮೊದಲು ನಿಲ್ಲುವವರು ಕನಕದಾಸರು ಮತ್ತು ಪುರಂದರದಾಸರು. ಭಕ್ತಿಯನ್ನು ಇಂದು ಬೀದಿಯ ಸರಕನ್ನಾಗಿ ನಾವು ನೋಡುತ್ತಿದ್ದೇವೆ. ವಾಸ್ತವವಾಗಿ ಅದು ಆತ್ಮನಿವೇದನೆಗೆ, ಸಾಮಾಜಿಕ ಬದುಕಿನಲ್ಲಿ ಸಂಸ್ಕಾರವನ್ನು ಮೂಡಿಸುವುದಕ್ಕೆ ಅಗತ್ಯ ಎಂದರು.
ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಸರಲ್ಲಿ ಶ್ರೇಷ್ಠರು ಕನಕದಾಸರು. ಇವರು ಒಬ್ಬ ತತ್ವಜ್ಞಾನಿ, ಕವಿ ಮತ್ತು ಸಂಗೀತಗಾರರೂ ಕೂಡ ಆಗಿದ್ದರು. ಯಾರೇ ಅಗಿರಲಿ ಭಕ್ತಿ ಇದ್ದರೆ ಅವರಿಗೆ ದೇವರು ಒಲಿಯುತ್ತಾನೆ. ಮಾನವತಾವಾದಿಯಾದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.
ಉಪನ್ಯಾಸಕರಾದ ಡಾ.ಡಿ.ಪುರುಷೋತ್ತಮ ಮಾತನಾಡಿ, ಕನಕದಾಸರು ಕೂಡಾ ಶಾಂತಿ ಅನುಭವ ಆಗಬೇಕಾದರೆ ಯುದ್ಧದ ದುಷ್ಪರಿಣಾಮಗಳ ಅರಿವಿರಬೇಕು. ಎಲ್ಲಾ ವೃತ್ತಿಗಳ ಮೂಲ ಉದ್ದೇಶ ಮನುಷ್ಯನ ಮುಲಭೂತ ಆವಶ್ಯಕತೆಗಳಲ್ಲದೆ ಬೇರೇನಿಲ್ಲ. ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ದಾಸರ ಕೀರ್ತನೆಯ ಸಾರ ಇದು. ಮಾಹಿತಿ ಇದ್ದರೆ ಸಾಲದು ಜ್ಞಾನ ಇರಬೇಕು. ನಮ್ಮೊಳಗಿನ ನಾನು ತ್ವವನ್ನು ಕಳೆದುಕೊಳ್ಳುವುದು ಬಹಳ ಮುಖ್ಯ. ನಾನೇ ಎಂಬ ಅಹಂ ಇರಬಾರದು. ನಮ್ಮಲ್ಲಿ ಬಾಗುವ ಗುಣ ಇರಬೇಕು. ನನ್ನೊಳಗೂ ಸ್ವೀಕರಿಸುವ ಗುಣ ಇರಬೇಕು ಎಂದರು.
ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪೂಣಚ್ಚ, ಡಾ.ಟಿ.ಎಸ್.ಮಹಾಲಕ್ಷ್ಮಿ ಹಾಗೂ ಕನ್ನಡ ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು.