

ಮಂಡ್ಯ: ಕನಕದಾಸರು ಹುಟ್ಟುವಾಗಲೇ ಸಾಧಕರಾಗಿರಲಿಲ್ಲ. ಸಾಮಾನ್ಯ ಮನುಷ್ಯರಾಗಿ ಅವರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಮಹಾನ್ ವ್ಯಕ್ತಿಯಾದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಕನಕ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮೇಲು-ಕೀಳು, ಬಡವ-ಶ್ರೀಮಂತರ ನಡುವೆ ಸಾಮರಸ್ಯ ಬೆಳೆದು ಶಾಂತಿ ನೆಲೆಸಲು ಕನಕ ಜಯಂತಿ ಪೂರಕ. ಈ ನೆಲೆ ಸತ್ಯ ಧರ್ಮಕ್ಕೆ ಶಕ್ತಿ ಕೊಟ್ಟಿದೆ. ಅದಕ್ಕೆ ಕಾರಣ ಕನಕದಾಸರಂತಹ ಮಹಾನ್ ವ್ಯಕ್ತಿಗಳು. ಇಂತವರ ವ್ಯಕ್ತಿತ್ವದಿಂದ ದೇಶದಲ್ಲಿ ಯಾವುದೇ ತಾರತಮ್ಯ ಮೂಡುವುದಿಲ್ಲ. ಪ್ರತಿ ಮನೆಯಲ್ಲೂ ಕನಕದಾಸರಂತಹ ವ್ಯಕ್ತಿಗಳು ಜನಿಸಲಿ ಎಂದರು.
ನಾಡಿನ ಎಲ್ಲರೂ ಕನಕದಾಸರಂತೆ ನಾಡಿನ ಹಿತಕ್ಕಾಗಿ ಪ್ರಾಮಾಣಿಕ ಹೆಜ್ಜೆ ಇಟ್ಟರೇ ದೇಶವು ಬೆಳಗಲಿದೆ. ಭಕ್ತಿಗೆ ಮೆಚ್ಚಿ ಕೃಷ್ಣನೆ ತಿರುಗಿದನೆಂದರೆ ಅವರ ಭಕ್ತಿಯಲ್ಲಿ ಪ್ರಾಮಾಣಿಕತೆ ಎಷ್ಟಿತ್ತು ಎಂದು ನಾವು ಯೋಜಿಸಬೇಕಿದೆ. ಇಂತವರು ಹುಟ್ಟಿದ ನೆಲದಲ್ಲಿ ನಾವು ಹುಟ್ಟಿದ್ದೇವೆ. ಅದೇ ನಮ್ಮ ಅದೃಷ್ಟ. ಕನಕದಾಸರ ಜಯಂತಿ ಹೆಮ್ಮೆಯ ವಿಚಾರ. ರಾಜ್ಯ ಸರ್ಕಾರ ಸಮಾಜದ ಎಲ್ಲ ಮಹಾತ್ಮರ ಜಯಂತಿ ಮಾಡುತ್ತಾ ಬಂದಿದೆ. ಸಾರ್ವಜನಿಕರು ಮಹಾನ್ ವ್ಯಕ್ತಿಗಳ ತತ್ವ ಮತ್ತು ಆದರ್ಶಗಳನ್ನು ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಕುಲಕ್ಕಿಂತ ಗುಣಮುಖ್ಯ. ಎಲ್ಲರೂ ಸಮಾನರು ಎಂದು ತೋರಿಸಿ ಕೊಟ್ಟವರು ಕನಕದಾಸರು. ಅವರ ಗುಣವನ್ನು ಮೈಗೂಡಿಸಿಕೊಂಡು ಮುನ್ನಡೆಯೋಣ, ಒಳ್ಳೆ ಕೆಲಸವನ್ನೇ ಮಾಡೋಣ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಚಟ್ನಹಳ್ಳಿ ಮಹೇಶ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ, ಉಪಾಧ್ಯಕ್ಷ ಶ್ರೀನಿವಾಸ್ ಇತರರಿದ್ದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮತ್ತು ಎಡಿಸಿ ಡಾ.ಎಚ್.ಎಲ್.ನಾಗರಾಜು ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಭವನದಲ್ಲಿ ಮುಕ್ತಾಯವಾಯಿತು.