ಸಿಎಂ ದಿನಾಂಕ ನಿಗದಿ ಬಳಿಕ ಕನಕದಾಸರ ಜಯಂತಿ ಆಚರಣೆ

ತಿ.ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿದರು. ಎಂ.ಎಸ್. ಮಹದೇವಸ್ವಾಮಿ, ಕೊತ್ತೇಗಾಲ ಬಸವರಾಜು, ರಂಗಸ್ವಾಮಿ ಇದ್ದರು.
ತಿ.ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿದರು. ಎಂ.ಎಸ್. ಮಹದೇವಸ್ವಾಮಿ, ಕೊತ್ತೇಗಾಲ ಬಸವರಾಜು, ರಂಗಸ್ವಾಮಿ ಇದ್ದರು.
Published on

ತಿ.ನರಸೀಪುರ: ಭಕ್ತ ಕನಕದಾಸರ ಜಯಂತಿಯನ್ನು ಅದ್ದೂರಿ ಅಥವಾ ಸಾಂಪ್ರದಾಯಿಕವಾಗಿ ಆಚರಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿನಾಂಕ ಪಡೆದ ಬಳಿಕ ನಿರ್ಧರಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ಪಟ್ಟಣದಲ್ಲಿ ನಿಗದಿತ ದಿನದಂದೇ ಜಯಂತಿ ಆಚರಿಸಬೇಕಾ ಅಥವಾ ಅದ್ದೂರಿ ಆಯೋಜನೆಗೆ ಮತ್ತೊಂದು ದಿನವನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ. ಮುಖ್ಯಮಂತ್ರಿಗಳು ತಿ.ನರಸೀಪುರಕ್ಕೆ ಆಗಮಿಸುವ ದಿನವನ್ನು ಖಚಿತಪಡಿಸಿಕೊಂಡು ಜಯಂತಿ ಆಯೋಜನೆಗೆ ತೀರ್ಮಾನಿಸಲಾಯಿತು.

ತಾಪಂ ಮಾಜಿ ಸದಸ್ಯ ಎಂ.ರಮೇಶ್ ಮಾತನಾಡಿ, ನ.8ರಂದು ಸಿಎಂ ಅವರನ್ನು ಆಹ್ವಾನಿಸಿ ಜಯಂತಿ ಆಚರಣೆ ಮಾಡಬೇಕು. ಈ ಬಗ್ಗೆ ತಾಲೂಕು ಆಡಳಿತ ಮತ್ತು ಕುರುಬರ ಸಂಘದ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು. ಜಯದೇವ ಹೃದ್ರೋಗ ಆಸ್ಪತ್ರೆಗೆ ತಾಲೂಕಿನವರೇ ಆದ ಡಾ.ದಿನೇಶ್ ಅವರು ಮುಖ್ಯಸ್ಥರಾಗಿರುವುದು ಹೆಮ್ಮೆಯ ವಿಚಾರ. ಅವರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಬೇಕಾಗಿತ್ತು. ಹಾಗಾಗಿ ಕನಕದಾಸರ ಜಯಂತಿಯಂದು ಅವರನ್ನು ಸನ್ಮಾನಿಸುವ ಕೆಲಸವನ್ನು ಮಾಡಬೇಕೆಂದು ಮನವಿ ಮಾಡಿದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎಸ್.ಮಹದೇವಸ್ವಾಮಿ ಮಾತನಾಡಿ, ಜಯಂತಿಗೆ ಸಿಎಂ ಹಾಗೂ ಹಲವು ಗಣ್ಯರನ್ನು ಆಹ್ವಾನಿಸುವ ಬಗ್ಗೆ ಈಗಾಗಲೇ ಆಂತರಿಕ ಭದ್ರತಾ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿದ್ದರಾಮಯ್ಯ ಅವರು ಆಗಮಿಸುವ ದಿನದ ಬಗ್ಗೆ ಡಾ.ಯತೀಂದ್ರ ಅವರು ಮಾಹಿತಿ ನೀಡಲಿದ್ದಾರೆ. ಬಳಿಕವಷ್ಟೇ ಜಯಂತಿ ಆಚರಣೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, ಕನಕದಾಸರ ಜಯಂತಿಗೆ ಸಿಎಂ ಬರುವುದಾದರೆ ಜಿಲ್ಲಾಧಿಕಾರಿ ಪೂರ್ವಭಾವಿ ಸಭೆ ನಡೆಸಿ, ತಾಲೂಕು ಆಡಳಿತಕ್ಕೆ ಸೂಚನೆ ನೀಡುತ್ತಾರೆ. ಹಾಗಾಗಿ ನಾವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ. ಸಿಎಂ ಬರುವ ಬಗ್ಗೆ ಮಾಹಿತಿ ನೀಡಿದ ಬಳಿಕವಷ್ಟೇ ಕನಕದಾಸರ ಜಯಂತಿ ಆಚರಣೆಗೆ ನಿರ್ಧರಿಸಲು ಸಾಧ್ಯ ಎಂದು ತಿಳಿಸಿದರು.

ಸಭೆಗೆ ಬಾರದ ಲೋಕೋಪಯೋಗಿ ಇಲಾಖೆ ಎಇಇ ಸೇರಿದಂತೆ ಹಲವು ಅಧಿಕಾರಿಗಳಿಗೆ ನೋಟಿಸ್ ನೀಡಲು ನಿರ್ಧರಿಸಲಾಯಿತು. ಯೋಜನಾಧಿಕಾರಿ ರಂಗಸ್ವಾಮಿ, ತಾಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮಾಜಿ ಸದಸ್ಯ ರಾಮಲಿಂಗಯ್ಯ, ದಸಂಸ ರಾಜ್ಯ ವಿಭಾಗೀಯ ಸಂಚಾಲಕ ಆಲಗೂಡು ಎಸ್. ಚಂದ್ರಶೇಖರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ರಾಜಣ್ಣ, ಪರಿಶಿಷ್ಟ ವರ್ಗಗಳ ಅಧಿಕಾರಿ ಕೋಮಲಾ, ಸೆಸ್ಕ್ ಎಇಇ ಕೆ.ವಿ.ವೀರೇಶ್, ಕೆಪಿಸಿಸಿ ಅಲ್ಪಸಂಖ್ಯಾತರ ಕಾರ್ಯದರ್ಶಿ ಬಿ.ಮನ್ಸೂರ್ ಆಲಿ ಇತರರು ಇದ್ದರು.

ದಲಿತರ ಕುಂದು ಕೊರತೆ ಆಲಿಸಿ, ಪರಿಹರಿಸಲು ಅ.28ರಂದು 11 ಗಂಟೆಗೆ ತಾಪಂ ಸಭಾಂಗಣದಲ್ಲಿ ಪ.ಜಾತಿ ಮತ್ತು ಪ.ಪಂಗಡ ಹಿತರಕ್ಷಣಾ ಸಮಿತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸರ್ಕಾರಿ ನಾಮನಿರ್ದೇಶಿತ ಸದಸ್ಯರ ಜತೆಗೆ ದಲಿತರ ಸಮಸ್ಯೆಗಳು ಹಾಗೂ ಕುಂದು ಕೊರತೆಗಳ ಅರಿವಿರುವ ಮುಖಂಡರನ್ನು ಸಭೆಗೆ ಆಯ್ಕೆ ಮಾಡಲಾಗುವುದು. ಹಾಗಾಗಿ ತಾಲೂಕಿನ ಸಮುದಾಯಗಳ ಮುಖಂಡರು ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು.

ಟಿ.ಜಿ.ಸುರೇಶಾಚಾರ್ ತಹಸೀಲ್ದಾರ್, ತಿ.ನರಸೀಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net