ಕನಕದಾಸರ ಸಂದೇಶ ಪಾಲನೆಯಿಂದ ಸಮಾಜದಲ್ಲಿ ಸೌಹಾರ್ದತೆ: ಸಚಿವೆ ಶೋಭಾ ಕರಂದ್ಲಾಜೆ

udp-30-kanaka
Published on

ಉಡುಪಿ: ಕನಕದಾಸರ ಕೀರ್ತನೆ ಹಾಗೂ ಸಾಹಿತ್ಯವನ್ನು ಓದುವ ಮೂಲಕ ಕನಕದಾಸರ ಸಂದೇಶಗಳನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಗುರುವಾರ ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ ಹಾಗೂ ಹಾಲುಮತ ಮಹಾ ಸಭಾ ಸಂಯುಕ್ತ ಆಶ್ರಯದಲ್ಲಿ ನಡೆದ ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಕನಕದಾಸರಿಗೂ ಹಾಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. ಕಾಗಿನೆಲೆಯಿಂದ ಉಡುಪಿಗೆ ಕೃಷ್ಣನನ್ನು ಹುಡುಕಿ ಬಂದ ಕನಕದಾಸರ ಭಕ್ತಿಯ ಪರಾಕಾಷ್ಠೆಗೆ ಕೃಷ್ಣ ದರ್ಶನ ನೀಡಿದ ಕನಕನ ಕಿಂಡಿ ಪ್ರಸಿದ್ಧಿ ಪಡೆದಿದೆ. ರಾಜ್ಯದಲ್ಲಿ ಹರಿದಾಸ ಆಂದೋಲನಕ್ಕೆ ಶಕ್ತಿ ತುಂಬಿದ ಆದಿ ಕೇಶವನ ಭಕ್ತ ಕನಕದಾಸರು ನಾಡಿನಾದ್ಯಂತ ಸಂಚರಿಸಿ, ಶಿಕ್ಷಣವೇ ಇಲ್ಲದಂಥ ಹಾಲುಮತ ಸಮಾಜಕ್ಕೆ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು.

ಹುಟ್ಟುವ ಜಾತಿ ಯಾವುದು ಎನ್ನುವುದು ಮುಖ್ಯವಲ್ಲ. ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತವಾದ ಭಕ್ತ ಅಲ್ಲ. ಅವರು ನಮ್ಮೆಲ್ಲರ ಗುರು. ಭಜನೆ ಮತ್ತು ಹಾಡಿನ ಮೂಲಕ ಸಮಾಜಕ್ಕೆ ಅನೇಕ ಸಂದೇಶವನ್ನು ನೀಡಿದ್ದಾರೆ ಎಂದರು.

ಶಾಸಕ ಯಶ್​ಪಾಲ್​ ಎ. ಸುವರ್ಣ ಅಧ್ಯಕ್ಷತೆ ವಹಿಸಿ, ಜಿಲ್ಲೆಯಲ್ಲಿ ಕನಕ ಭವನವನ್ನು ನಿಮಾರ್ಣ ಮಾಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಕನಕ ಜಯಂತಿಯನ್ನು ಕನಕ ಭವನದಲ್ಲಿಯೇ ನಡೆಸುವಂತ ಪ್ರಾಮಾಣಿಕ ಪ್ರಯತ್ನವನ್ನು ಈ ಬಾರಿಯ ಅಧಿವೇಶನದಲ್ಲಿ ಮಾಡಲಾಗುವುದು ಎಂದರು.

ಉಡುಪಿ ಸ.ಪ.ಪೂ ಕಾಲೇಜಿನ ಹಿರಿಯ ಉಪನ್ಯಾಸಕಿ ಡಾ. ಸುಮಾ ಎಸ್​ ಉಪನ್ಯಾಸ ನೀಡಿ, ಯುದ್ಧ, ಕೌರ್ಯ, ಹಿಂಸೆಗಳೇ ಜಗತ್ತಿನ ಮೂಲೆ ಮೂಲೆ ಗಳಲ್ಲಿ ವಿಜೃಂಬಿಸುತ್ತಿರುವ ಈ ಕಾಲ ಘಟ್ಟದಲ್ಲಿ ಬದುಕಿನ ಸಾರ್ಥಕತೆಯ ನಿಜವಾದ ಪರ್ಯಾಯ ಯಾವುದೆಂದರೆ ಅದು ಕನಕದಾಸರು. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಸಮಾಜದಲ್ಲಿ ಮೇಲು-ಕೀಳು ತಾರತಮ್ಯವನ್ನು ಅನುಭವಿಸಿಕೊಂಡು ಬಂದ ಅವರು ಮನನೊಂದು ಸಮಾಜವನ್ನು ಪರಿವರ್ತನೆಗೊಳಿಸಿ ಅರೋಗ್ಯಕರವಾದ ಸಮಾಜದ ನಿಮಾರ್ಣಕ್ಕಾಗಿ ಕುಂದು ಕೊರತೆಗಳನ್ನು ಎತ್ತಿ ಹಿಡಿಯಲು ಕಾವ್ಯವನ್ನು ಮಾಧ್ಯಮವಾಗಿ ಬಳಸಿಕೊಂಡರು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ , ಜಿ.ಪಂ.​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್​., ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಅರುಣ್​ ಕೆ., ಕನಕದಾಸ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ ಡೊಳ್ಳಿನ , ಹಾಲುಮತ ಮಹಾ ಸಭಾ ಜಿಲ್ಲಾ ಅಧ್ಯಕ್ಷ ಸಿದ್ಧಪ್ಪ ಐಹೊಳೆ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಟೀಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರದಿಪ್​ ಡಿ.ಎಂ. ಹಾವಂಜೆ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net