ಕನಕದಾಸರ ಹೆಸರಲ್ಲಿ ಒಗ್ಗಟ್ಟು ಕನಕ ಜಯಂತಿ ಉದ್ಘಾಟಿಸಿ ಪ್ರಭಾವತಿ ಕೆ.ಆರ್ ಅಭಿಪ್ರಾಯ

mng--10 Dec Kanaka jayanthi
Published on


ಮಂಗಳೂರು: ಕನಕದಾಸರ ಹೆಸರಿನಲ್ಲಿ ಕುರುಬ ಸಮಾಜದ ಬಂಧುಗಳು ಒಗ್ಗಟ್ಟಾಗುವುದು ಪ್ರಶಂಸನೀಯ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಅಧ್ಯಕ್ಷೆ, ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಅಧ್ಯಕ್ಷೆ ಪ್ರಭಾವತಿ ಕೆ.ಆರ್ ಹೇಳಿದರು.


ಮಂಗಳೂರು ಪುರಭವನದಲ್ಲಿ ಭಾನುವಾರ ಕರಾವಳಿ ಕುರುಬರ ಸಂಘದ ವತಿಯಿಂದ 536ನೇ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕುರುಬ ಸಮಾಜ ಕನಕರ ತತ್ವ ಸಿದ್ದಾಂತದಲ್ಲಿ ನಂಬಿಕೆ ಇಟ್ಟುಕೊಂಡು ಆ ಸಿದ್ಧಾಂತದಲ್ಲಿ ಗುರುತಿಸಿಕೊಂಡವರು. ಸಿಎಂ ಸಿದ್ದರಾಮಯ್ಯ ಕಾಂತರಾಜು ಆಯೋಗದ ವರದಿ ಅನುಷ್ಠಾನದ ವಿಷಯದಲ್ಲಿ ಆಸಕ್ತಿ ವಹಿಸಿದ್ದು ಅದು ಅನುಷ್ಠಾನವಾದರೆ ಸಾಮಾಜಿಕ ನ್ಯಾಯ ಸಿಗಲಿದೆ. ಕಾಂತರಾಜು ವರದಿ ಶೀಘ್ರ ಅನುಷ್ಠಾನಗೊಳ್ಳಲು ಸಿಎಂ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.


ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್ ಮಾತನಾಡಿ, ಕುರುಬ ಸಮಾಜ ದೂರದ ಊರುಗಳಿಂದ ಮಂಗಳೂರಿಗೆ ಬಂದು ನೆಲೆಸಿ, ಇಲ್ಲಿನ ಜನರ ಜತೆ ಬೆರೆತು ಬಾಳಿದ್ದಾರೆ. ಬೇರೆ ಸಮಾಜವನ್ನು ದ್ವೇಷಿಸದೆ ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಎಲ್ಲರೊಳಗೊಂದಾಗಿ ಬದುಕಿದ್ದು ಕುರುಬ ಸಮಾಜದ ಹೆಚ್ಚುಗಾರಿಕೆ ಎಂದು ಬಣ್ಣಿಸಿದರು.


ಶಿವಮೊಗ್ಗದ ಸಹಪ್ರಾಧ್ಯಾಪಕ ಡಾ.ಮಂಜುನಾಥ್ ಎಂ.ಎಂ. ಕನಕ ಸಂದೇಶ ನೀಡಿದರು. ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ಎಸ್.ಜಿ, ಸಂಘದ ಗೌರವಾಧ್ಯಕ್ಷ ಡಾ.ಕೆ.ಇ.ಪ್ರಕಾಶ್, ಕ್ಯಾನ್ಸರ್ ತಜ್ಞ ಡಾ.ಲೇಪಾಕ್ಷಿ ಶುಭ ಹಾರೈಸಿದರು. ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ಯರಜೇರಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಕೆ.ಎನ್ ಬಸವರಾಜಪ್ಪ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಿರಂಜನ್ ಎಲ್ ವಂದಿಸಿದರು. ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ, ಸನ್ಮಾನ
ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ್ ಟಿ.ಡಿ ಅವರನ್ನು ಸನ್ಮಾನಿಸಲಾಯಿತು. ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ಯರಜೇರಿ ಪ್ರಾಯೋಜಕತ್ವದಲ್ಲಿ ಎಸ್ಸೆಸ್ಸೆಲ್ಲಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ಸಹಿತ ಗೌರವಿಸಲಾಯಿತು. ಪತ್ರಕರ್ತ ಮೋಹನದಾಸ್ ಮರಕಡ ಅವರ ಶೈಕ್ಷಣಿಕ ದತ್ತು ಯೋಜನೆಯ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಭಾವಚಿತ್ರದ ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಶರವು ಮಹಾಗಣಪತಿ ದೇವಸ್ಥಾನದ ಬಳಿಯಿಂದ ಪುರಭವನದ ವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಪೂರ್ಣ ಕುಂಭ ಹೊತ್ತ ಮಹಿಳೆಯರು, ಜಾನಪದ ಕಲಾತಂಡಗಳು ಮೆರವಣಿಗೆಗೆ ಸಾಥ್ ನೀಡಿದರು. ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಗಾನ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net