ಮೌಲ್ಯಗಳನ್ನು ಪ್ರಚುರಪಡಿಸಿದ ದಾಸಶ್ರೇಷ್ಠ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಬಣ್ಣನೆ

11_11_Mdy_03(Kanakadasa Jayanthi)
Published on

ಮಂಡ್ಯ: ಸಮಾಜಕ್ಕಾಗಿ ದುಡಿದ ಮಹಾನ್ ಪುರುಷರನ್ನು ಸದಾ ನೆನೆಯಬೇಕು. ಜತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಢ್ಯವನ್ನು ಹೋಗಲಾಡಿಸಿ ಸಮಸಮಾಜ ನಿರ್ಮಾಣ ಮಾಡುವಲ್ಲಿ ಕನಕದಾಸರ ಪಾತ್ರ ಅಪಾರ. ಕನಕದಾಸರು ಕೀರ್ತನೆಗಳ ಮೂಲಕ ಸಾರ್ವಜನಿಕರಿಗೆ ಸದಾ ಮೌಲ್ಯಗಳ ಬಗ್ಗೆ ತಿಳಿಸುತ್ತಿದ್ದರು ಎಂದರು.

ಸರ್ಕಾರ ಪುಣ್ಯ ಪುರುಷರ ಜಯಂತಿ ಆಚರಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಜತೆಗೆ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ ಎಂದು ಜಯಂತಿಗಳನ್ನು ಆಚರಣೆ ಮಾಡುತ್ತ ಬಂದಿದೆ. ಕನಕದಾಸರು ದಾಸ ಸಾಹಿತ್ಯಕ್ಕೆ ಹಲವಾರು ಸಾಹಿತ್ಯವನ್ನು ಕೊಡುಗೆ ನೀಡಿದ್ದಾರೆ. ನಾಡು, ಸಂಸ್ಕೃತಿ ಹಾಗೂ ಸಮಾಜಕ್ಕೆ ಮೌಲ್ಯಯುತ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಅಂಥ ಮಹಾನ್ ವ್ಯಕ್ತಿಯನ್ನು ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಕನಕದಾಸರು 15ನೇ ಶತಮಾನದಲ್ಲಿಯೇ ಜಾತಿ-ಭೇದ, ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದರು. ಸಾಮಾನ್ಯ ನಾಗರಿಕರಿಗೂ ಸರಳವಾಗಿ ಅರ್ಥವಾಗುವಂತೆ ತಮ್ಮ ಕೀರ್ತನೆಗಳ ಮೂಲಕ ಮೌಲ್ಯಾಧಾರಿತ ವಿಚಾರಗಳನ್ನು ಸಾರಿದರು ಎಂದು ತಿಳಿಸಿದರು.

ಜನಪರ ಚಿಂತಕ ಡಾ.ಎ.ಮಹೇಶ್ ಚಿಕ್ಕಲೂರು ಮಾತನಾಡಿ, ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಬಿ.ಪುಟ್ಟಬಸವಯ್ಯ, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್ ಕುಮಾರ್, ಕುರುಬರ ಸಂಘದ ಅಧ್ಯಕ್ಷ ಎಂ.ಎಲ್ ಸುರೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಶ್ರೀನಿವಾಸ್, ಡಿಡಿಪಿಐ ಜವರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net