ಕನಕದಾಸರ ಸಂದೇಶ ನಮಗೆ ಆದರ್ಶ

RemasterDirector_1a5c03258
ಪಿರಿಯಾಪಟ್ಟಣದ ಕನಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮವನ್ನು ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು. ಡಿ.ರವಿಶಂಕರ್, ಎಚ್.ಡಿ.ಗಣೇಶ್, ಸುನಿಲ್ ಕುಮಾರ್, ಬಿ.ಸುಬ್ರಮಣ್ಯ, ಕೋಟೆ ಶಿವಣ್ಣ, ರಮೇಶ್, ಮಹದೇವ್, ನಿತಿನ್ ವೆಂಕಟೇಶ್, ನಿಸರ್ಗಪ್ರಿಯ ಇತರರು ಇದ್ದರು.
Published on

ಪಿರಿಯಾಪಟ್ಟಣ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಅನೇಕ ವಿಷಯಗಳನ್ನು ತಿಳಿಸಿದ್ದಾರೆ. ಅವರ ತತ್ವ ಸಂದೇಶ ನಮಗೆ ಆದರ್ಶವಾಗಬೇಕಿದೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದ ಕನಕ ಸಮುದಾಯ ಭವನದಲ್ಲಿ ತಾಲೂಕು ಕುರುಬರ ಸಂಘ, ಕನಕ ಅಭಿವೃದ್ಧಿ ಸಹಕಾರ ಸಂಘ ಮತ್ತು ಕನಕ ನೌಕರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನಕದಾಸರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಉಪಯುಕ್ತ ಸಂಗತಿಗಳಾಗಿವೆ. ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲ ಮಹನೀಯರು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಆದರೆ ಅವರನ್ನು ನಾವು ಅನುಸರಿಸುವಲ್ಲಿ ಹಿಂದಿದ್ದೇವೆ ಎಂದರು.

ಕುರುಬ ಸಮುದಾಯದವರು ಸಲ್ಲಿಸಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಯತ್ನಿಸಲಾಗುವುದು. ಶಿಕ್ಷಣ ಸಂಸ್ಥೆ ಸ್ಥಾಪಿಸಲು ಬೇಡಿಕೆ ಇಟ್ಟಿರುವ ಭೂಮಿ ಲಭ್ಯತೆಯ ಬಗ್ಗೆ ಕೂಡಲೇ ಕ್ರಮ ವಹಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿದೆ. ಶೀಘ್ರದಲ್ಲೇ ತಾಲೂಕಿನಲ್ಲಿ ಕುಸುಮ್ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಾಗುವುದು. ಇದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಮಾತನಾಡಿ, ಕನಕದಾಸರ ತತ್ವ ಸಂದೇಶ, ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಬೇಕಿದೆ. ಹಲವು ಮಹನೀಯರ ಜಯಂತಿಗಳನ್ನು ನಾವು ಆಚರಿಸುತ್ತಿದ್ದೇವೆ. ಅವೆಲ್ಲದರ ಉದ್ದೇಶ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಬದುಕಬಹುದು. ನಾವೆಲ್ಲರೂ ಮೊದಲಿಗೆ ಮನುಷ್ಯ ಜಾತಿ ಎಂಬುದನ್ನು ಮರೆಯದೆ ಜೀವನದಲ್ಲಿ ಮುನ್ನಡೆಯೋಣ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ತಾಲೂಕು ಕುರುಬ ಸಮಾಜದ ವತಿಯಿಂದ ಕನಕ ಸಮುದಾಯದ ಎದುರು ಇರುವ ವೃತ್ತಕ್ಕೆ ಕನಕವೃತ್ತ ಎಂದು ಹೆಸರಿಡಬೇಕು, ಬೆಟ್ಟದಪುರ ರಸ್ತೆಯಲ್ಲಿ ಶಾಲೆ ತೆರೆಯಲು 4-5 ಎಕರೆ ಜಮೀನು ನೀಡಬೇಕು, ಸಮಾಜದಲ್ಲಿ ಪ್ರಮುಖರಾದ ಎಚ್.ಡಿ.ಗಣೇಶ್ ಸೇರಿದಂತೆ ಹಲವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಕ್ಯಾಲೆಂಡರ್ ಬಿಡುಗಡೆ ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯುವಕರಿಗೆ ಸನ್ಮಾನ ಮಾಡಲಾಯಿತು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ಎಚ್.ಡಿ.ಗಣೇಶ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಮಣ್ಯ, ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ರಾಜ್ಯ ಉಣ್ಣೆ ಮತ್ತು ಕುರಿ ಸಾಕಣೆ ನಿಗಮದ ಅಧ್ಯಕ್ಷ ರಮೇಶ್, ನಿರ್ದೇಶಕ ಮಹದೇವ್, ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ತಹಸೀಲ್ದಾರ್ ನಿಸರ್ಗಪ್ರಿಯ, ಸಮಾಜದ ಮುಖಂಡರಾದ ಡಿ.ಎ.ಜವರಪ್ಪ, ಡಿ.ಟಿ.ಸ್ವಾಮಿ, ಡಿ.ಎ.ನಾಗೇಂದ್ರ, ಶ್ರೀಧರ್, ರಂಗಸ್ವಾಮಿ, ಡಾ.ರಾಜೇಶ್, ಡಾ.ಸುನಿಲ್ ಕುಮಾರ್, ನಂಜುಂಡಸ್ವಾಮಿ, ಚಿಕ್ಕೇಗೌಡ, ನಂಜುಂಡೇಗೌಡ, ಮಹೇಶ್, ಕೆಂಪಣ್ಣ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net