

ಚಿಕ್ಕಬಳ್ಳಾಪುರ: ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯ ನಡುವೆಯೂ ಜಿಲ್ಲಾದ್ಯಂತ ದಾಸಶ್ರೇಷ್ಠ ಕನಕ ಜಯಂತಿಯನ್ನು ಸೋಮವಾರ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಕೇಂದ್ರದಲ್ಲಿನ ಗಂಗಮ್ಮನಗುಡಿ ರಸ್ತೆಯಲ್ಲಿರುವ ಕುರುಬರ ಸಂಘದ ಕಚೇರಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕನಕದಾಸರ ಚಿಂತನೆಗಳು ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ, ನೆಮ್ಮದಿಯ ನವ ಸಮಾಜ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ರಾಮಚಂದ್ರ ಅಭಿಪ್ರಾಯಪಟ್ಟರು.
ಕನಕದಾಸರು ಸರಳ ಮತ್ತು ಸಜ್ಜನಿಕೆಗೆ ಹೆಸರಾದವರು. ನಾಡಿನ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ, ಭಕ್ತಿಭಾವವನ್ನು ಸಾರುತ ಮಾನವೀಯ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದರು ಎಂದರು.
ಭೂಮಂಡಲದಲ್ಲಿ ಯಾವುದೇ ಜಾತಿ ಮತ ಇಲ್ಲ. ಎಲ್ಲರೂ ಒಂದೇ ಎನ್ನುವುದರ ಮೂಲಕ ಕುಲದ ಹೆಸರಿನಲ್ಲಿ ಹೊಡೆದಾಡದಿರಿ ಎಂಬ ಸಂದೇಶವನ್ನು ಸಾರಿದರು. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಒಗ್ಗಟ್ಟಿನಿಂದ ಜೀವನ ನಡೆಸಿದರೆ ಆಗ ಕನಕದಾಸರ ಜಯಂತಿ ಆಚರಣೆಗೆ ಅರ್ಥ ಬರಲಿದೆ ಎಂದು ಗೌರವಾಧ್ಯಕ್ಷ ಸಿ.ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು. ಸಂಘದ ಕಾರ್ಯದರ್ಶಿ ಕೆಂಪರಾಜ್, ನಿರ್ದೇಶಕರಾದ ಶ್ರೀನಿವಾಸ್, ಶಿವಕುಮಾರ್, ಪಿ.ಪ್ರಕಾಶ್, ನಾರಾಯಣಸ್ವಾಮಿ, ಹಿರಿಯ ಮುಖಂಡರಾದ ರಾಮು, ಸುಮಿತ್ರಮ್ಮ, ರಂಗಪ್ಪ, ಎಂ.ಲಕ್ಷ್ಮಯ್ಯ ಮತ್ತಿತರರು ಇದ್ದರು.